ಜಗನ್ಮಾತೆಯಾದ ಪಾರ್ವತೀದೇವಿಯು ತನ್ನ ಮೈಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿದಳು. ಪಾರ್ವತೀ ದೇವಿ ಎಂದಿನಂತೆ ಸ್ನಾನಕ್ಕೆ ಹೋಗುವಾಗ ‘‘ಗಣಪತಿ’’ಯನ್ನು ದ್ವಾರದಲ್ಲಿ ಕಾವಲಿರಿಸಿರುತ್ತಾಳೆ. ‘‘ಪರಶಿವ’’ ಎಂದಿನಂತೆ ಒಳಪ್ರವೇಶಕ್ಕೆ ಮುಂದಾಗುತ್ತಾನೆ. ಗಣಪತಿ ಇದನ್ನು ವಿರೋಧಿಸುತ್ತಾನೆ. ಇದರಿಂದ ‘‘ಕ್ರೋಧಿತ’’ನಾದ ಶಿವ ಗಣಪತಿಯ ತಲೆಯನ್ನು ತುಂಡರಿಸುತ್ತಾನೆ. ಇದರಿಂದ ಪಾರ್ವತಿ ದುಃಖೀಸಿ ನೋವಿನಿಂದ ಬಳಲುತ್ತಾಳೆ. ಪತಿಪರಮೇಶ್ವರನಲ್ಲಿ ‘‘ನನ್ನ ಮಗನನ್ನು ಬದುಕಿಸಿ’’ ಎಂದು ಪ್ರಾರ್ಥಿಸುತ್ತಾಳೆ. ಪರಮೇಶ್ವರ ತನ್ನ ಗಣಗಳಿಗೆ ‘‘ಉತ್ತರಕ್ಕೆ’’ ತಲೆ ಹಾಕಿ ಮಲಗಿದವರ ತಲೆಯನ್ನು ತನ್ನಿರಿ ಎಂದು ಆದೇಶ ನೀಡುತ್ತಾನೆ. ಅದರಂತೆ ಗಣಗಳು ಹುಡುಕಿ, ಹುಡುಕಿ ಮುಂದೆ ಹೋಗ್ತಾ ಇರುವಾಗ ಒಂದು ಆನೆ ‘‘ಉತ್ತರಕ್ಕೆ ’’ ತಲೆ ಹಾಕಿ ಮಲಗಿತ್ತು. ಅದರ ತಲೆಯನ್ನು ತುಂಡರಿಸಿ ತಂದು ಶಿವನಿಗೆ ಗಣಗಳು ತಂದೊಪ್ಪಿಸುತ್ತಾರೆ. ಆಗ ಶಿವ ಗಜದ ತಲೆಯನ್ನು ಗಣಪತಿಯ ಕುತ್ತಿಗೆಗೆ ಜೋಡಿಸಿ ‘‘ಆಶೀರ್ವಾದ’’ ಮಾಡಿ ಅನುಗ್ರಹಿಸುತ್ತಾನೆ. ಅಂದಿನಿಂದ ಗಣಪತಿ ‘‘ಗಜಮುಖ’’ನಾಗುತ್ತಾನೆ. ಗಜಮುಖನಿಗೆ ಮೊದಲ ಪೂಜೆ ಆಗಲಿ ಎಂದು ಪರಶಿವ ತಿಳಿಸುತ್ತಾ ಭಕ್ತರ ‘‘ಸಂಕಷ್ಟ’’ಗಳನ್ನು ಗಜಮುಖ ಶೀಘ್ರ ಪರಿಹರಿಸುವಂತಾಗಲಿ ಎಂದು ಹಾರೈಸುತ್ತಾನೆ. ಅಂತೆಯೇ ಎಲ್ಲಾ ದೇವಾನುದೇವತೆಗಳು ‘‘ಮಹಾವಿಷ್ಣು’’ ಸಹಿತ ವಿಶೇಷ ಅನುಗ್ರಹ ‘‘ಗಜಮಖ’’ನಿಗೆ ಮಾಡುತ್ತಾರೆ.
ಒಮ್ಮೆ ಬ್ರಹ್ಮದೇವರ ಅಪೇಕ್ಷೆಯಂತೆ ಸಂತಸಗೊಂಡ ಗಜಮುಖ ನೃತ್ಯ ಮಾಡುತ್ತಾನೆ. ಇದನ್ನು ನೋಡಿದ ‘‘ಚಂದ್ರದೇವ’’ ನಗುತ್ತಾನೆ. ಇದರಿಂದ ಕೋಪಗೊಂಡ ಗಜಮುಖ ಚಂದ್ರನಿಗೆ ಕ್ಷೀಣಿಸುವಂತೆ ‘‘ಶಾಪ’’ ನೀಡುತ್ತಾನೆ. ಅಂದಿನಿಂದ ‘‘ನಾಟ್ಯ ಗಣಪತಿ’’ಯಾಗಿ ನೃತ್ಯಗಾರರಿಗೆ ವಿಶೇಷ ಅನುಗ್ರಹ ಮಾಡುತ್ತಾನೆ. ಒಮ್ಮೆ ಕೈಲಾಸದಲ್ಲಿ ಸಹೋದರನಾದ ‘‘ಸುಬ್ರಹ್ಮಣ್ಯ’’ನೊಡನೆ ಪಂಥವೇರ್ಪಟ್ಟಾಗ ಜಗತ್ತನ್ನು ಯಾರು ಮೊದಲು ಸುತ್ತಿ ಬರುತ್ತಾರೆ ನೋಡೋಣ ಎಂಬ ಸವಾಲಿಗೆ ಗಣಪತಿಯು ಜಗತ್ತಿಗೆ ಒಡೆಯರಾದ ನಮ್ಮ ತಂದೆ-ತಾಯಿ ಅಂದರೆ ‘‘ಶಿವ-ಪಾರ್ವತಿ ದೇವಿ’’ ಹಾಗಾಗಿ ಅವರಿಗೆ ‘‘ಪ್ರದಕ್ಷಿಣೆ’’ ಮಾಡಿ ತಂದೆ-ತಾಯಿಗಿಂತ ಮಿಗಿಲಾದ ದೇವರಿಲ್ಲ ‘‘ಜಗತ್ತು’’ ಎಂದರೆ ‘‘ತಂದೆ-ತಾಯಿ’’ ಎಂಬುದಾಗಿ ಜಗತ್ತಿಗೆ ಈ ಮೂಲಕ ‘‘ಸಂದೇಶ’’ ತೋರಿಸಿದ ನಮ್ಮ ಸಿದ್ಧಿವಿನಾಯಕ.
ಒಮ್ಮೆ ಪರಶುರಾಮ ದೇವರು ಮತ್ತು ಗಜಮುಖ ಯುದ್ಧ ಮಾಡುವಾಗ ‘‘ದಂತ’’ ಮುರಿಯುತ್ತದೆ. ಮುಂದೆ ‘‘ವ್ಯಾಸ ಪ್ರಣೀತ’’ವಾದ ‘‘ಮಹಾಭಾರತ’’ವನ್ನು ಇದೇ ಮುರಿದ ದಂತದಿಂದ ‘‘ಗಜಮುಖ’’ ಬರೆದನೆಂಬುದು ‘‘ಪುರಾಣ’’ಗಳಿಂದ ತಿಳಿಯುತ್ತದೆ.
‘‘ಗಜಮುಖ’’ನಾದ ಸಿದ್ಧಿವಿನಾಯಕ ‘‘ವಕ್ರತುಂಡ’’ನಾಗಿ ಸಿಂಹವಾಹನವನ್ನೇರಿ ಮತ್ಸರಾಸುರನೆಂಬ ದೈತ್ಯನನ್ನು ವಧಿಸಿದ. ‘‘ಏಕದಂತ’’ನಾಗಿ ಮೂಷಿಕ ವಾಹನವನ್ನೇರಿ ಮದಾಸುರನೆಂಬ ಅಸುರನನ್ನು ಸಂಹರಿಸಿದ. ‘‘ಮಹೋದರ’’ನಾಗಿ ಇಲಿಯನ್ನೇರಿ ಮೋಹಾಸುರನೆಂಬ ರಾಕ್ಷಸನನ್ನು ವಧಿಸಿದ. ‘‘ಲಂಭೋಧರ’’ ನಾಗಿ ಮೂಷಿಕವನ್ನೇರಿ ಭಕ್ತರ ಸಂಕಷ್ಟ ಪರಿಹರಿಸಿದ. ‘‘ವಿಘ್ನರಾಜ’’ನಾಗಿ ಶೇಷವಾಹನವನ್ನೇರಿ ಮಮತಾಸುರನೆಂಬ ದೈತ್ಯನನ್ನು ಕೊಂದ. ‘‘ಧೂಮ್ರವರ್ಣ’’ನಾಗಿ ಮೂಷಿಕವಾಹನವೇರಿ ದೈತ್ಯನಾದ ಅಭಿಮಾನುಸುರನನ್ನು ಸಂಹರಿಸಿದ. ‘‘ಗಜಾನನ’’ನಾಗಿ ಇಲಿಯನ್ನೇರಿ ಲೋಭಾಸುರನೆಂಬ ಅಸುರನನ್ನು ವಧಿಸಿದ. ‘‘ಲೋಕಕಂಟಕ’’ರಾದ ಅಸುರರನ್ನು ಸಂಹರಿಸಿದ ಸರ್ವ ಸಂಕಷ್ಟ ಪರಿಹರಿಸಿ ‘‘ಸಂಕಷ್ಟಹರ ಗಣಪತಿ’’ಯೆನಿಸಿದ ಗಜಮುಖ.
ಕಲಿಯುಗದಲ್ಲಿ ‘‘ಸಂಕಷ್ಟಹರ ಗಣಪತಿ’’ಯ ಪೂಜೆ, ಆರಾಧನೆ ಹೆಚ್ಚಾಗಿ ನಡೆಯುತ್ತಿದೆ. ಇಂತಹ ‘‘ಸಂಕಷ್ಟಹರ ಗಣಪತಿ’’ ಹೇಗಿದ್ದಾನೆ ಎಂಬುದನ್ನು ತಿಳಿಯೋಣ. ‘‘ಚತುಭುìಜ’’ನಾಗಿ ನೀಲಿವಸ್ತ್ರ ‘‘ಧರಿಸಿ’’ ‘‘ಕೆಂಪು ತಾವರೆ’’ಯ ಮೇಲೆ ಕುಳಿತಿರುತ್ತಾನೆ. ಕೈಯಲ್ಲಿ ‘‘ಪಾಯಸ’’ದ ಪಾತ್ರೆ ‘‘ಅಂಕುಶ-ಪಾಶ’’ಗಳನ್ನು ಹಿಡಿದುಕೊಂಡು ಬಲಕೈಯಲ್ಲಿ ‘‘ವರ ಮುದ್ರೆ’’ ಹೊಂದಿ ಭಕ್ತರ ‘‘ಸಂಕಷ್ಟ’’ ಪರಿಹರಿಸುತ್ತಾನೆ. ಗಜಮುಖ ಸಿದ್ಧಿವಿನಾಯಕನಿಗೆ ‘‘ಮೊದಲ ಪೂಜೆ’’ ಮಾಡಿದಲ್ಲಿ ಎಲ್ಲ ಕಾರ್ಯಗಳು ಜಯವಾಗುತ್ತವೆ.
ಇನ್ನು ಹೇರಂಬ ಗಣಪತಿ ಬಹಳ ‘‘ವೈಶಿಷ್ಟ್ಯ’’ಪೂರ್ಣನಾಗಿ ಕಂಗೊಳಿಸುತ್ತಿದ್ದಾನೆ. ಹೇರಂಬ ಗಣಪತಿಗೆ ‘‘ಐದು ತಲೆ’’ಗಳು, ‘‘ಹತ್ತು ಕೈ’’ಗಳು, ‘‘ಹದಿನೈದು ಕಣ್ಣು’’ಗಳು ಇದ್ದು ‘‘ಸಿಂಹ’’ದ ಮೇಲೆ ಕುಳಿತು ಭಗವದ್ ಭಕ್ತರಿಗೆ ‘‘ಅಭಯ’’ ನೀಡಿ ಅನುಗ್ರಹಿಸುತ್ತಾನೆ. ಸಿದ್ಧಿ-ಬುದ್ಧಿಗಾಗಿ ಪ್ರತಿನಿತ್ಯ ‘‘ಗಣಪತಿ’’ಯನ್ನು ಪೂಜಿಸಿ ಅರ್ಚಿಸಿ, ಪ್ರಾರ್ಥಿಸಿ ‘‘21’’ ನಮಸ್ಕಾರ ಮಾಡಿದರೆ ಭಕ್ತರ ಸಕಲ ಇಷ್ಟಾರ್ಥ ಕೈಗೂಡುತ್ತವೆ. ಪ್ರತಿನಿತ್ಯ ಬೆಳಿಗ್ಗೆ – ಸಂಜೆ ಗಣಪತಿ ದೇವರ ಮುಂಭಾಗದಲ್ಲಿ ತುಪ್ಪ ದೀಪ ಬೆಳಗಿ ಏಕದಂತಾಯವಿದ್ಮಹೇ ವಕ್ರತುಂಡಾಯ ದೀ ಮಹೀ ತನ್ನೊದಂತಿಃ ಪ್ರಚೋದಯಾತ್| ಈ ಸ್ತೋತ್ರ ‘‘ಮಂತ್ರ’’ ನೂರೆಂಟು (108 ಬಾರಿ) ಬಾರಿ ಶುದ್ಧ ಮನಸ್ಸಿನಿಂದ ಪಠಿಸಿ ಆಯುರಾರೋಗ್ಯದೊಂದಿಗೆ ಸಕಲ ಐಶ್ವರ್ಯ ‘‘ನೆಮ್ಮದಿ’’ ಪ್ರಾಪ್ತವಾಗುತ್ತದೆ. ‘‘ಸ್ತೋತ್ರಮ್’’ ಹಾಗೆಯೇ ಸಿದ್ಧಿವಿನಾಯಕನ ಪೂರ್ಣಾನುಗ್ರಹ ಪ್ರಾಪ್ತವಾಗುತ್ತದೆ.
– ವೈ. ಎನ್. ವೆಂಕಟೇಶ್‌ಮೂರ್ತಿ ಭಟ್
ಅರ್ಚಕರು, ಧಾರ್ಮಿಕ ಲೇಖಕರು ಕೋಟೇಶ್ವರ