ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿವನ ಡಮರುಗದಿಂದ ಪ್ರದೋಷಕಾಲದಲ್ಲಿ ಆಗಮ, ತಂತ್ರ ಶಾಸ್ತ್ರಗಳು ಉಗಮವಾಯಿತು ಎಂದು ಪುರಾಣಗಳು ಹೇಳುತ್ತಿವೆ. ಪಾಣೀಮಹರ್ಷಿಯವರಿಂದ ತತ್ವ ಶಾಸ್ತ್ರಗಳು ಹುಟ್ಟಿಕೊಂದ್ದು, ಪ್ರಸ್ತುತ ಇವುಗಳು ಪ್ರಚಲಿತದಲ್ಲಿವೆ ಎಂದು ದೇವಳದ ತಂತ್ರಿ ಕೊಲ್ಲೂರು ಮಂಜುನಾಥ ಅಡಿಗ ಹೇಳಿದರು.
ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬುಧವಾರ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವದ ಸಮಾರೋಪ ಧಾರ್ಮಿಕ ಸಭಾ ಕಾರ್ಯಕ್ರಮ ಶುಭಾಶಂಸನೆಗೈದರು. ಹಿಂದಿನ ಕಾಲದಲ್ಲಿನ ರಾಜ, ಮಹಾರಾಜರು, ಜಮೀನುದಾರರು ಮತ್ತು ಸ್ಥಳೀಯ ಭಕ್ತರು ಸೇರಿ ದೇವರನ್ನು ಆರಾಧಿಸುವ ನೆಲೆಯಲ್ಲಿ ಶಾಸ್ತ್ರಬದ್ಧವಾಗಿ ನಿರ್ಮಾಣ ಮಾಡಿದ್ದಾಗಿದೆ. ದೇವಸ್ಥಾನಗಳನ್ನು ಯಾವುದೇ ಸರ್ಕಾರಗಳು ರಚನೆ ಮಾಡಿದ್ದಲ್ಲ. ಮನುಷ್ಯನ ಶರೀರದಲ್ಲಡಗಿದ ಸೂಕ್ಷ್ಮರೂಪದ ದೇವರ ಶಕ್ತಿಯ ತರಂಗಗಳು ದೇವಳದಲ್ಲಿ ವ್ಯಕ್ತವಾಗುವ ಮೂಲಕ ಒಂದು ವಿಶೇಷವಾದ ಶಕ್ತಿ ಉತ್ಪತ್ತಿಯಾಗುತ್ತದೆ ಎಂಬ ಕಲ್ಪನೆಯೊಂದಿಗೆ ಹಿಂದೆ ನಿಗದಿತ ಸ್ಥಳಗಳಲ್ಲಿ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದರು. ದೇವಾಲಯ ಹಾಗೂ ದೇವಸ್ಥಾನಗಳಗೆ ವ್ಯತ್ಯಾಸವಿದೆ ಎಂದ ಅಡಿಗರು, ಪ್ರಾಕಾರಗಳಿಲ್ಲದಿರುವ, ದೈವ, ದೇವರುಗಳಿಲ್ಲದ್ದು ದೇವಾಲಯಗಳಾದರೆ, ಶಿಖರ, ಪ್ರಾಕಾರ, ಮಹಾಪೀಠ, ಪರಿವಾರ ದೇವರುಗಳು, ನಿತ್ಯಪೂಜೆ, ಅಭಿಷೇಕ ಇವೆಲ್ಲವೂ ಅಲ್ಲಿದ್ದರೆ ಅದು ದೇವಸ್ಥಾನ ಅಂತ ಕರೆಸಿಕೊಳ್ಳುತ್ತದೆ ಎಂದರು.
ಸಮಿತಿ ಅಧ್ಯಕ್ಷ ಬಿ ಎಸ್ ಸುರೇಶ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ತಂತ್ರಿ ಕೊಲ್ಲೂರು ಮಂಜುನಾಥ ಅಡಿಗ ಇವರನ್ನು ಸನ್ಮಾನಿಸಲಾಯಿತು. ದಾನಿಗಳನ್ನು ಗೌರವಿಸಲಾಯಿತು. ಜಿಪಂ ಮಾಜಿ ಸದಸ್ಯೆ ಗೌರಿ ದೇವಾಡಿಗ, ದೇವಳದ ಓಕುಳಿ ಸಮಿತಿ ಅಧ್ಯಕ್ಷ ಮಂಜುನಾಥ ಶೆಟ್ಟಿ, ಉಪ್ಪುಂದ ಶ್ರೀರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಯು. ಸುಭಾಷ್‌ಚಂದ್ರ ಪುರಾಣಿಕ್, ಶ್ರೀಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಹೆಚ್. ವಿಜಯ್ ಶೆಟ್ಟಿ, ಲಾವಣ್ಯ ಬೈಂದೂರು ಅಧ್ಯಕ್ಷ ನರಸಿಂಹ ಬಿ. ನಾಯಕ್, ಖಂರೈಸೇಸ ಸಂಘದ ನಿರ್ದೇಶಕ ಭರತ್ ದೇವಾಡಿಗ, ಉದ್ಯಮಿ ಪ್ರದೀಪ್ ಖಾರ್ವಿ, ಹಿರಿಯರಾದ ವೆಂಕಪ್ಪಯ್ಯ ಹೊಳ್ಳ ಉಪಸ್ಥಿತರಿದ್ದರು.
ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್ ವಂದಿಸಿದರು. ನಂತರ ಲಾವಣ್ಯ ಕಲಾವಿದರಿಂದ ರಾಜೇಂದ್ರ ಕಾರಂತ್ ಬೆಂಗಳೂರು ನಿರ್ದೇಶನದ ನಾಯಿ ಕಳೆದಿದೆ ನಾಟಕ ಪ್ರದರ್ಶನಗೊಂಡಿತು.