ನರೇಂದ್ರ ಎಸ್ ಗಂಗೊಳ್ಳಿ.
ಒಂದು ಸಮುದಾಯವನ್ನು ಓಲೈಸುವವರಂತೆ ತೋರುವ ಒಂದಷ್ಟು ಸಾಹಿತಿ ಗಣ್ಯರೆನ್ನಿಸಿಕೊಂಡವರು ಒಬ್ಬರ ಹಿಂದೊಬ್ಬರಂತೆ ಪ್ರಶಸ್ತಿ ವಾಪಾಸ್ ಪ್ರಕ್ರಿಯೆ ಎನ್ನುವ ಬೂಟಾಟಿಕೆ ಕಾರ್ಯದಲ್ಲಿ ತೊಡಗಿಕೊಂಡಿರುವುದನ್ನು ನೋಡಿ ನಮ್ಮ ದೇಶದ ಪ್ರಜ್ಞಾವಂತ ಜನ ನಗುತ್ತಿರುವುದು ಸುಳ್ಳಲ್ಲ. ಅಷ್ಟರ ಮಟ್ಟಿಗೆ ಈ ಸಾಹಿತಿಗಳ ಪ್ರಶಸ್ತಿ ವಾಪಾಸಾತಿ ಪ್ರಹಸನ ನಗೆಪಾಟಲಿನ ವಿಷಯವಾಗಿ ಮಾರ್ಪಟ್ಟಿದೆ ಎನ್ನುವುದೇ ಸ್ವತಃ ಅವರಿಗೂ ತಿಳಿಯದ ವಿಚಾರವೇನಲ್ಲ. ಅದು ಗೊತ್ತಿದ್ದೂ ಅವರುಗಳು ಮತ್ತೇ ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದರೆ ಅವರುಗಳ ಸಾಮಾಜಿಕ ಬದ್ಧತೆ, ನೈತಿಕತೆಯನ್ನು ಪ್ರಶ್ನಿಸದೆ ವಿಧಿಯಿಲ್ಲ. ಪ್ರಶಸ್ತಿ ವಾಪಾಸಾತಿ ಸಾಹಿತಿಗಳೇ ನಿಮಗ್ಗೊತ್ತಾ? ನಿಮ್ಮ ಈ ಕಾರ್ಯವನ್ನು ಜನರು ಗಣನೆಗೆ ತೆಗೆದುಕೊಂಡೇ ಇಲ್ಲ. ನೀವೇನೇ ಮಾಡಿದರೂ ಅಷ್ಟೇ. ಬರೇ ಪ್ರಶಸ್ತಿಯಲ್ಲ ನೀವುಗಳು ಈಗ ನೀಡಿದ್ದೀರಲ್ಲಾ ಅದೇ ಕಾರಣಗಳಿಗಾಗಿ ನೀವು ಬೇರೇನನ್ನೇ ತ್ಯಾಗ ಮಾಡಿದರೂ ಜನ ಖಂಡಿತ ಮಾತನಾಡುವುದಿಲ್ಲ .ಜನ ನೀವಂದುಕೊಂಡಷ್ಟು ದಡ್ಡರಲ್ಲ. ಪ್ರತೀ ಮನುಷ್ಯನಿಗೂ ವಿವೇಚನೆ ಅನ್ನುವುದು ಇರುತ್ತದೆ. ಜನರನ್ನು ಪದೇ ಪದೇ ಮೋಸಗೊಳಿಸಲು ಸಾಧ್ಯವಿಲ್ಲ ಎನ್ನುವುದು ನಿಮಗಿನ್ನೂ ಅರ್ಥವಾಗದಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ನಿಮ್ಮ ಸೋಗಲಾಡಿತನ ಜನಕ್ಕೆ ಅದಾಗಲೇ ಸ್ಪಷ್ಟವಾಗಿ ಅರ್ಥವಾಗಿಬಿಟ್ಟಿದೆ.
ಕವಿಯೊಬ್ಬರು ಬರೆದಿದ್ದರು.
ನೀನು ಪ್ರೀತಿಸೋದನ್ನ ನಿಲ್ಲಿಸಿಬಿಟ್ಟೆ ಎಂಬ ದುಖಃವಿಲ್ಲ.
ಗೆಳತೀ,ನೀನು ದ್ವೇಷಿಸುವದನ್ನೂ ಈ ಮಧ್ಯೆ
ಜಾರಿಯಲ್ಲಿಟ್ಟಿಲ್ಲ ಎಂಬುದೇ ನಿಜವಾದ ದುಖಃ
ಇದೊಂದು ಸಾಮಾನ್ಯ ಸಾಲುಗಳು ಅಂತನ್ನಿಸಬಹುದು. ಆದರೆ ನಮ್ಮ ಪ್ರಶಸ್ತಿ ವಾಪಾಸಿ ಸಾಹಿತಿಗಳ ಮನಸ್ಥಿತಿಗೆ ಇದು ಅತ್ಯಂತ ಸೂಕ್ತವಾಗಿ ತಾಳೆಯಾಗುತ್ತದೆ ಎಂದೆನ್ನಿಸುತ್ತೆ. ಜನರು ಒಂದೇ ನಮ್ಮನ್ನು ಪ್ರೀತಿಸಬೇಕು ಇಲ್ಲಾ ದ್ವೇಷಿಸಬೇಕು. ಎರಡನ್ನೂ ಮಾಡುತ್ತಿಲ್ಲವೆಂದರೆ ನಾವುಗಳು ಅವರಿಗೆ ಲೆಕ್ಕಕ್ಕೆ ಇಲ್ಲ ಎಂದು ಅರ್ಥ. ಪ್ರೀತಿಸುವಂತಹ ಕೆಲಸವನ್ನು ಅವರು ಎಷ್ಟು ಮಾಡಿದ್ದಾರೆನ್ನುವುದು ಪ್ರಶ್ನಾತೀತ. ಇವರುಗಳ ತಲೆಬುಡವಿಲ್ಲದ ವಿಚಾರ ರಹಿತ ಕಾರ್ಯಗಳನ್ನು ದ್ವೇಷಿಸಬೇಕು ಎನ್ನಿಸಿದರೂ ಅದರಿಂದ ಯಾವ ಪ್ರಯೋಜನವೂ ಇಲ್ಲ. ಹಾಗಾಗಿ ಜನ ಸುಮ್ಮನಿದ್ದುಬಿಟ್ಟಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಅವರ ಪ್ರಶಸ್ತಿ ವಾಪಾಸಿ ಹಣದಿಂದ ಅಕಾಡೆಮಿಗೆ ಒಂದಿಷ್ಟು ಹೆಚ್ಚಿನ ಹಣ ಸಂಗ್ರಹವಾಗಿ ನಿಜವಾದ ಅರ್ಹ ಸಾಹಿತಿಗಳಿಗೆ ಪ್ರಶಸ್ತಿಗಳು ಸಿಗಲಿ ಎನ್ನುವ ಆಶಯವೂ ಇದರ ಹಿಂದಿರಬಹುದು. ರಾಜ್ಯ ಸರ್ಕಾರದ ವೈಫಲ್ಯಗಳಿಗೆಲ್ಲಾ ಕೇಂದ್ರ ಸರ್ಕಾರವನ್ನು ಅದರಲ್ಲೂ ದೇಶದ ಪ್ರಧಾನಿಯನ್ನು ಕಾರಣವಾಗಿಸುವ ಇವರ ದಡ್ಡತನಕ್ಕೆ, ಅವಿವೇಕದ ಮಾತುಗಳಿಗೆ ನಿಜಕ್ಕೂ ಜನ ಬೆಚ್ಚಿಬಿದ್ದಿದ್ದಾರೆ. ಇವರನ್ನೆಲ್ಲಾ ಸಾಹಿತಿಗಳು ಅಂದೋರ‍್ಯಾರು ಅಂತ ಮುಸಿಮುಸಿ ನಗುತ್ತಿದ್ದಾರೆ.
ಇತ್ತೀಚೆಗೆ ಸ್ನೇಹಿತನೊಬ್ಬ ಒಂದು ಲೋಟದ ಚಿತ್ರವನ್ನು ಕಳಿಸಿ ನಾನು ನನಗೆ ಒಂದನೇ ತರಗತಿಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಸಿಕ್ಕ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೆ ಎಂದು ಕುಹಕದ ನುಡಿಗಳನ್ನು ಬರೆದಿದ್ದ. ಗಮ್ಮತ್ತು ಎನ್ನಿಸಿ ಅದನ್ನು ಫೇಸ್ ಬುಕ್ ನಲ್ಲಿ ನಾನು ಬಟ್ಟಿ ಇಳಿಸಿದ್ದೆ. ಅದಕ್ಕೆ ಒಬ್ಬರು ಕಮೆಂಟ್ ಮಾಡಿದ್ದರು. ಸರ್ ನೀವು ಹೀಗೆ ಮಾಡಬೇಡಿ ಅದು ನಿಮಗೆ ಪ್ರಶಸ್ತಿ ಕೊಟ್ಟ ಶಾಲೆಗೆ ಅವಮಾನ. ಹೌದು. ಲೋಟದ ಚಿತ್ರ ನಮ್ಮ ಜನ ಪ್ರಶಸ್ತಿ ವಾಪಾಸಿ ಸಾಹಿತಿಗಳ ಕಾರ‍್ಯವನ್ನು ಅದೆಷ್ಟು ನಿಕೃಷ್ಟವಾಗಿ ನೋಡುತ್ತಿದ್ದಾರೆ ಎನ್ನುವುದಕ್ಕೆ ಒಂದು ಸಾಕ್ಷಿಯಂತಿತ್ತು. ಇನ್ನೊಬ್ಬ ಸ್ನೇಹಿತರ ಕಮೆಂಟು ನಮ್ಮ ಜನರಲ್ಲಿ ಇರುವ ನಿಜವಾದ ಅರಿವನ್ನು ಒಂದು ಸಂಸ್ಥೆಗೆ ಕೊಡಬೇಕಾದ ಗೌರವದ ಮೌಲ್ಯವನ್ನು ಸೂಚಿಸುತ್ತಿತ್ತು. ನಮ್ಮ ಈ ಸಾಹಿತಿಗಳಿಗೆ ಅಷ್ಟಾದರೂ ಅರಿವು ಇಲ್ಲದಿರುವುದು ನಿಜಕ್ಕೂ ಬೇಸರ ತರಿಸುತ್ತದೆ. ಅವರನ್ನು ಸಾಹಿತಿಗಳೆಂದು ಕರೆಯುವುದಕ್ಕೇ ನಾಚಿಕೆ ಎನ್ನಿಸುತ್ತದೆ ಎಂದಿದ್ದರು. (ಕುಂದಾಪ್ರ ಡಾಟ್ ಕಾಂ ಲೇಖನ)
ಬಿಜೆಪಿ ಆಡಳಿತದಲ್ಲೂ ಕೂಡ ಇರದ ರಾಜ್ಯಗಳಲ್ಲಿ ನಡೆದ ಕೆಲವೊಂದು (ಅದು ಅಲ್ಪಸಂಖ್ಯಾತರಿಗೆ ಸಂಬಂಧಿಸಿದ್ದೇ ಆಗಿರಬೇಕು ಅದು ಈ ಸಾಹಿತಿಗಳ ಅಲಿಖಿತ ನಿಯಮ) ಘಟನೆಗಳನ್ನಷ್ಟೇ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಾ ಸ್ವಾಯತ್ತ ಸಂಸ್ಥೆಯೊಂದು ಇವರ ಸಾಹಿತ್ಯ ಸೇವೆಗಾಗಿ ನೀಡಿರುವ ಪ್ರಶಸ್ತಿಗಳನ್ನು ಹಿಂತಿರುಗಿಸಿ ಅದನ್ನು ಪ್ರತಿಭಟನೆ ಎಂದು ಪ್ರತಿಬಿಂಬಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅನವಶ್ಯಕವಾಗಿ ಭಾರತದ ಮಾನವನ್ನು ಕಳೆಯಹೊರಟಿರುವ ಇವರ ಉದ್ದೇಶಗಳ ಬಗೆಗೆ ಸಂದೇಹಗಳಿವೆ. ಇದು ಸಂಪೂರ್ಣ ರಾಜಕೀಯ ಪ್ರೇರಿವಾದುದಲ್ಲಧೆ ಬೇರೇನೂ ಅಲ್ಲ. ದೇಶದ ವಿವಿದೆಡೆಗಳಲ್ಲಿ ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುವಾಗ, ಸಾಮೂಹಿಕ ಅತ್ಯಾಚಾರಗಳು ನಡೆದಾಗ, ಸಿಖ್ ದಂಗೆ ನಡೆದಾಗ, ಭಯೋತ್ಪಾದಕರ ಬಾಂಬ್ ಸ್ಫೋಟಗಳಿಗೆ ಸಹಸ್ರಾರು ಮುಗ್ಧ ಜನರ ಹತ್ಯೆಯಾದಾಗ, ಸಹಸ್ರಾರು ಕೋಟಿ ರೂಪಾಯಿಗಳ ವಿವಿಧ ಹಗರಣಗಳು ನಡೆದಾಗ, ಸಲ್ದಾನ್ ರಶ್ದಿಯವರ ಪುಸ್ತಕವನ್ನು ನಿಷೇಧಿಸಿದಾಗ, ತಸ್ಲೀಮಾ ನಸ್ರೀನ್ ವಿರುದ್ಧ ಫತ್ವಾ ಹೊರಡಿಸಿ ಆಕೆ ದೇಶದಲ್ಲಿ ತಲೆಮರೆಸಿಕೊಂಡು ಇರಬೇಕಾದ ಪರಿಸ್ಥಿತಿ ಬಂದಾಗ… ಹೇಳಿ ಸಾಹಿತಿಗಳೇ ಎಲ್ಲಿ ಸತ್ತು ಹೋಗಿತ್ತು ನಿಮ್ಮ ಅಂತಃಸಾಕ್ಷಿ? ಎಲ್ಲಿ ಅಡಗಿತ್ತು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು? ತೀರಾ ಇತ್ತೀಚೆಗೆ ಕರ್ನಾಟಕದ ಮೂಡಬಿದಿರೆಯಲ್ಲಿ ಪ್ರಶಾಂತ ಪೂಜಾರಿ ಹತ್ಯೆಯಾಯಿತು. ಮತ್ತೆ ಮೊನ್ನೆ ಮೊನ್ನೆ ಪಿಎಸ್‌ಐ ಜಗದೀಶ ಕಳ್ಳರಿಂದಲೇ ಹತ್ಯೆಯಾದರು. ಸಾಮೂಹಿಕ ಅತ್ಯಾಚಾರ ಪ್ರಕರಣಗಳಂತೂ ನಿತ್ಯ ನಿರಂತರ ವರದಿಯಾಗುತ್ತಲಿವೆ. ಈ ಎಲ್ಲವೂ ಆಯಾ ಜಿಲ್ಲಾಡಳಿತದ ಮತ್ತು ರಾಜ್ಯ ಸರ್ಕಾರದ ಆಡಳಿತದ ಘೋರ ವೈಫಲ್ಯಕ್ಕೆ ಸಾಕ್ಷಿ. ಹೇಳಿ ನೀವೆಷ್ಟು ಜನ ಈ ಹತ್ಯೆ, ಪ್ರಕರಣಗಳನ್ನು ಖಂಡಿಸಿ ಪ್ರಶಸ್ತಿ ಹಿಂತಿರುಗಿಸುತ್ತೀರಿ? ಶಿವಮೊಗ್ಗದ ಲೇಖಕರೊಬ್ಬರು ನಿಮ್ಮನ್ನು ಬೆಂಬಲಿಸಿಕೊಂಡು ನಿಮ್ಮದು ತತ್ವಾಧಾರಿತ ಚಳುವಳಿ ಎಂದು ಕರೆದರು. ಹೇಳಿ ಸಾಹಿತಿಗಳೇ ಯಾವ ತತ್ವದಡಿಯಲ್ಲಿ ನಿಮ್ಮ ಚಳುವಳಿ ನಡೀತಾ ಇದೆ? (ಕುಂದಾಪ್ರ ಡಾಟ್ ಕಾಂ ಲೇಖನ)
ಪಕ್ಷಪಾತದ ನಿಲುವುಗಳಲ್ಲಿ ಯಾವುದಾದರೂ ತತ್ವ ಇರಲು ಸಾಧ್ಯವೇ? ಪ್ರಶಸ್ತಿ ಹಿಂತಿರುಗಿಸುವಲ್ಲಿಯೂ ತಾವುಗಳು ಜಾಣತನ ಮೆರೆಯುತ್ತಿರುವುದು ನಿಮಗೊಬ್ಬರಿಗೆ ಅರ್ಥವಾಗುವಂತಾದ್ದು ಎಂದು ತಿಳಿದಿರುವಿರೇನು? ಅಷ್ಟಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದರ ಅರ್ಥ ತಮಗೆ ತಿಳಿದಿದೆಯೇ? ಬಹುಸಂಖ್ಯಾತರ ನಂಬಿಕೆಗಳನ್ನು, ದೇವರನ್ನು ಟೀಕಿಸಿ ಮಾತನಾಡುವುದೊಂದೇ ಅಭಿವ್ಯಕ್ತಿ ಸ್ವಾತಂತ್ರ್ಯವೆ? ನೀವು ಅಷ್ಟು ವಿಚಾರವಾದಿಗಳಾಗಿದ್ದರೆ ಅಲ್ಪಸಂಖ್ಯಾತರ ದೇವರುಗಳ ಮೇಲಿನ ನಂಬಿಕೆಗಳನ್ನು ಪ್ರಶ್ನಿಸಿ. ನೋಡೋಣ ನಿಮ್ಮ ತಾಕತ್ತನ್ನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಯನ್ನು… ಒಂದು ಸಲ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ಸಮಾಜಕ್ಕೆ ನೀವು ನಿಜವಾಗಿಯೂ ಕೊಟ್ಟ ಕೊಡುಗೆಯೇನು? ಗಾಂಧೀಜಿ ಸತ್ಯ ಹರಿಶ್ಚಂದ್ರನ ನಾಟಕ ನೋಡಿ ಆ ಕುರಿತ ಕತೆಗಳನ್ನು ಓದಿ ರಾಮರಾಜ್ಯದ ಕನಸು ಕಂಡರು. ನಿಮ್ಮ ಯಾವ ಕೃತಿಗಳು ಯಾರ ಜೀವನದ ಮೇಲೆ ಅದೆಷ್ಟು ಪ್ರಭಾವ ಬೀರಿವೆ? ಸಾಹಿತಿಯಾದವನು ಸಮಾಜದ ಆಗು ಹೋಗುಗಳಿಗೆ ಸ್ಪಂದಿಸಬೇಕು ನಿಜ. ಆದರೆ ನೀವು ಮಾಡುತ್ತಿರುವುದನ್ನು ಸ್ವಲ್ಪವೇ ಬುದ್ಧಿ ಇರುವ ಯಾರೂ ಕೂಡ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. (ಕುಂದಾಪ್ರ ಡಾಟ್ ಕಾಂ ಲೇಖನ)
ನಿಮ್ಮದು ಕೇವಲ ಅಲ್ಪಸಂಖ್ಯಾತರನ್ನು ಓಲೈಸುವ ಪ್ರಧಾನಿ ಮೋದಿಯವರನ್ನು ಅಕಾರಣವಾಗಿ ದ್ವೇಷಿಸುವ ವಿಚಿತ್ರ ಮನೋಭಾವ. ನೀವುಗಳು ಜಾತ್ಯತೀತತೆಯ ಬಗೆಗೆ ಮಾತನಾಡುವುದೆಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಅನ್ನಿಸುತ್ತದೆ. ಹೋಗಲಿ ನಮಗೆ ನಿಜಕ್ಕೂ ಸಮಾಜ ಉದ್ಧಾರ ಮಾಡಬೇಕೆಂದರೆ ಬಂದ ಹಾಗು ತೆಗೆದುಕೊಂಡ ಪ್ರಶಸ್ತಿಗಳೆಲ್ಲವನ್ನೂ ಹರಾಜು ಹಾಕಿ ಅದರಲ್ಲಿ ಬಂದ ಹಣವನ್ನು ಒಂದಿಷ್ಟು ಬಡವರಿಗೆ ಹಂಚಿಬಿಡಿ. ಆಗ ಜನ ನಿಮ್ಮನ್ನು ನೋಡಿ ಖಂಡಿತಾ ಭೇಷ್ ಎಂದಾರು. ಅದುಬಿಟ್ಟು ಬಿಟ್ಟಿ ಪ್ರಚಾರಕ್ಕಾಗಿ ಈ ತರಹ ಪ್ರಶಸ್ತಿ ವಾಪಾಸಿ ಪ್ರಹಸನ ನಡೆಸುವುದು ನಿಮಗೆ ಹೇಳಿಸಿದ್ದಲ್ಲ.
‘ಕುಂದಾಪ್ರ ಡಾಟ್ ಕಾಂ’ನಲ್ಲಿ ಪ್ರಕಟವಾಗುವ ಲೇಖನ, ಬರಹಗಳು ಆಯಾ ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ.
[box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted.[/box]