ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕುಂದಾಪುರ ದಕ್ಷಿಣ ವತಿಯಿಂದ ಕೋಣಿಯ ಮಾನಸ ಜ್ಯೋತಿ ವಿಶೇಷ ಶಾಲೆಗೆ ಸೋಲಾರ್ ವಿದ್ಯುಚ್ಛಕ್ತಿ ಉಪಕರಣಗಳ ಕೊಡುಗೆಯಾಗಿ ನೀಡಲಾಯಿತು.
ಮಾನಸ ಜ್ಯೋತಿ ಶಾಲಾ ವಠಾರದಲ್ಲಿ ನಡೆದ ಸಭೆಯಲ್ಲಿ ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ ಮಲ್ಯ ಯೋಜನೆಯ ರೂ.1,25,000 ನೆರವನ್ನು ಮಾನಸ ಜ್ಯೋತಿ ಟ್ರಸ್ಟ್ ಅಧ್ಯಕ್ಷ ಡಾ| ಬಿ.ವಿ.ಉಡುಪರಿಗೆ ಹಸ್ತಾಂತರಿಸಿದರು.
ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದ ಡಾ| ಬಿ.ವಿ. ಉಡುಪ, ದಾನಿಗಳು ನೀಡುತ್ತಿರುವ ನೆರವು, ಶಾಲೆಯ ನಿರ್ವಾಹಕರ ನಿಸ್ವಾರ್ಥ ಸೇವೆ ಹಾಗೂ ವಿಶೇಷ ಶಾಲೆ ಮಾನವೀಯತೆಯ ದೃಷ್ಠಿಯಿಂದ ನಡೆಯುತ್ತಿರಲು ಕಾರಣವಾಗಿದೆ” ಎಂದರು. ಅಗತ್ಯವಾಗಿದ್ದ ಸೋಲಾರ್ ಶಕ್ತಿ ಯೋಜನೆ ಕಾರ್ಯಗತಗೊಳಿಸಿದ ರೋಟರಿ ಕುಂದಾಪುರ ದಕ್ಷಿಣಕ್ಕೆ ಅವರು ಅಭಿನಂದನೆ ಸಲ್ಲಿಸಿದರು.
ಸೆಲ್ಕೋ ಸೋಲಾರ್ ಕಂಪೆನಿ ಪರವಾಗಿ ಮಂಜುನಾಥ ಅವರನ್ನು ಗೌರವಿಸಲಾಯಿತು. ಯೋಜನೆ ಅನುಷ್ಠಾನಕ್ಕೆ ಸಹಕರಿಸಿದ ವಾಸುದೇವ ಕಾರಂತ, ರೋಟರಿ ದಕ್ಷಿಣದ ನಿಕಟಪೂರ್ವ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ ಮಾಹಿತಿ ನೀಡಿದರು.
ರೋಟರಿ ಡಿಡಿಎಫ್ ಯೋಜನೆ ಮೂಲಕ ನೀಡಲಾದ ಈ ಕಾರ್ಯದಲ್ಲಿ ಸೆಲ್ಕೋ ಸೋಲಾರ್ ಕಂಪೆನಿ ಸಹಕರಿದ್ದು, ತ್ವರಿತವಾಗಿ ಯೋಜನೆ ಅನುಷ್ಠಾನಗೊಳಿಸಿದೆ.
ಮಾನಸ ಜ್ಯೋತಿ ಟ್ರಸ್ಟಿ ಕೆ. ಕೆ. ಕಾಂಚನ್ ನಿರೂಪಿಸಿದರು. ಟ್ರಸ್ಟಿ ಯು.ಎಸ್.ಶೆಣೈ, ರೋಟರಿ ಕುಂದಾಪುರ ದಕ್ಷಿಣದ ಸದಸ್ಯರಾದ ಮನೋಹರ ಭಟ್, ದೋಮ. ಚಂದ್ರಶೇಖರ, ಮುರಳೀಧರ ಉಳ್ಳೂರು, ಮಾನಸ ಜ್ಯೋತಿ ನಿರ್ವಾಹಕರಾದ ಮಾರ್ಜೆ, ಶೋಭಾ ಮಧ್ಯಸ್ಥ ಉಪಸ್ಥಿತರಿದ್ದರು.