ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಬಿಜೆಪಿ ಯುವ ಮೋರ್ಚಾ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಪಂಜಿನ ಮೆರವಣಿಗೆ ಹಾಗೂ ವೀರ ಯೋಧ ನಮನ ಕಾರ್ಯಕ್ರಮ ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಜರುಗಿತು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಮಾತನಾಡಿ, ದೇಶದ ಪ್ರತಿ ಪ್ರಜೆಯು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಅದರಲ್ಲೂ ಯುವಕರು ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು.ಇಂದಿನ ಯುವಕರು ದೇಶಕ್ಕೆ ಸಲ್ಲಿಸುವ ಸೇವೆ ಅಮೂಲ್ಯವಾಗಿರುತ್ತದೆ ಎಂದರು.
ವಾಗ್ಮಿ ಆದರ್ಶ್ ಗೋಖಲೆ ಅವರು ದಿಕ್ಸೂಚಿಭಾಷಣ ಮಾಡಿ, ಕಾರ್ಗಿಲ್ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಲು ಶ್ರಮಿಸಿದ ನಮ್ಮ ಯೋಧರ ಪರಾಕ್ರಮ ಮೆಚ್ಚುವಂತಹದ್ದು ಜೊತೆಗೆ ಆ ಸಮಯದಲ್ಲಿ ಮರಣವನ್ನಪ್ಪಿದ ವೀರ ಯೋಧರಿಗೆ ನಮನ ಸಲ್ಲಿಸುವುದು ನಮ್ಮೆಲ್ಲ ಆದ್ಯ ಕರ್ತವ್ಯ. ಜೊತೆಗೆ ಈ ಬಾರಿಯ ದೀಪಾವಳಿಯನ್ನು ಯೋಧರ ನೆನಪಿನಲ್ಲಿ ಆಚರಿಸೋಣ ಎಂದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪ್ರಸ್ತಾವಿಕ ಮಾತುಗಳಾಡಿದರು, ಕುಂದಾಪುರ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಮಾತುಗಳನಾಡಿದರು.
ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದ ಸಂಭ್ರಮದಲ್ಲಿ ಹೋರಾಡಿದ ನಿವೃತ್ತ ಸೈನಿಕರಾದ ಗಣಪತಿ ಖಾರ್ವಿ ಬಸ್ರೂರು, ಹವಾಲ್ದಾರ್ ಯೋಗೇಶ್ ಕಾಂಚನ್ ಕೋಟ, ಸುಧೀರ್ ಎಚ್. ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್.ಕೆ. ಎಸ್, ರಾಜ್ಯ ಓಬಿಸಿ ವಿಠ್ಠಲ್ ಪೂಜಾರಿ ಐರೋಡಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚೇತನ್ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೃಹತ್ ಪಂಜಿನ ಮೆರವಣಿಗೆಯಲ್ಲಿ 15ಕ್ಕೂ ಮಿಕ್ಕಿ ನಿವೃತ್ತ ಸೈನಿಕರು ಭಾಗಿಯಾಗಿ ಮೆರವಣಿಗೆಗೆ ಮೆರಗು ನೀಡಿದರು.
ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ ಸ್ವಾಗತಿಸಿದರು. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಪತ್ ಶೇರಿಗಾರ್ ವಂದನಾರ್ಪಣೆಗೈದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಪ್ರಸಾದ್ ಬಿಲ್ಲವ ಕಾರ್ಯಕ್ರಮವನ್ನು ನಿರೂಪಿಸಿದರು. ಬಿಜೆಪಿ ಮಂಡಲ ನಿಕಟ ಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ ವಂದೇ ಮಾತರಂ ಗೀತೆ ಹಾಡಿದರು.