ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ‘ಸರ್ಟಿಫಿಕೆಟ್‌ಗಿಂತ ಸಂಸ್ಕಾರ ಮುಖ್ಯ. ಶಿಕ್ಷಣವು ಸಂಸ್ಕಾರಭರಿತ ಮನಸ್ಸನ್ನು ಕಟ್ಟುವ ಪ್ರಕ್ರಿಯೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಹೇಳಿದರು.
ಆಳ್ವಾಸ್ ಮುಂಡ್ರೆದೆಗುತ್ತು ಕೆ. ಅಮರನಾಥ ಶೆಟ್ಟಿ ಕೃಷಿಸಿರಿ ವೇದಿಕೆಯಲ್ಲಿ ಗುರುವಾರ ನಡೆದ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾವಂತರಾದವರೇ ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿಕೊಂಡರೆ ಅಂತಹ ವಿದ್ಯೆಗೆ ಏನು ಬೆಲೆ ಮಾನವೀಯ ಸಂವೇದನೆಯನ್ನುಂಟು ಮಾಡುವ ಶಿಕ್ಷಣ ನಮಗೆ ಬೇಕಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಂತಹ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ನಾವು ಅಕ್ಷರಸ್ಥರಾದರೆ ಸಾಲದು. ನಾವು ವಿದ್ಯಾಂತರಾಗಬೇಕು. ಅಕ್ಷರಸ್ಥರೆಲ್ಲರೂ ವಿದ್ಯಾವಂತರಾಗಲು ಸಾಧ್ಯವಿಲ್ಲ. ಸಂಸ್ಕಾರ ಭರಿತ ಅಕ್ಷರಸ್ಥ ಮಾತ್ರ ವಿದ್ಯಾವಂತ. ಅಕ್ಷರ ಕಲಿತ ವ್ಯಕ್ತಿ ದುಷ್ಟನೂ, ಭ್ರಷ್ಟನೂ ಆಗಬಹುದು. ಆದರೆ ಸಂಸ್ಕಾರ ಕಲಿತ ವ್ಯಕ್ತಿ ಎಂದಿಗೂ ದುಷ್ಟ, ಭ್ರಷ್ಟ ಆಗಲಾರ. ಅಕ್ಷರಸ್ಥರಿಗೂ ವಿದ್ಯಾವಂತರಿಗೂ ಇರುವ ವ್ಯತ್ಯಾಸವನ್ನು ನಾವು ತಿಳಿದುಕೊಳ್ಳಬೇಕು ಎಂದರು.
ನಮ್ಮ ಜೀವನದಲ್ಲಿ ಎರಡು ದಿನಗಳು ಮುಖ್ಯವಾಗುತ್ತದೆ. ಒಂದು ನಾವು ಹುಟ್ಟಿದ ದಿನ ಇನ್ನೊಂದು ನಮ್ಮ ಬದುಕಿನ ಕಾರಣವನ್ನು ತಿಳಿದುಕೊಂಡ ದಿನ ಎಂದರು.
ಯಶಸ್ವಿ ಜೀವನದಲ್ಲಿ ಶಿಕ್ಷಣ ಕೇವಲ ಶೇ. 15 ರಷ್ಟು ಪರಿಣಾಮ ಬೀರಿದರೆ ಧನಾತ್ಮಕ ಚಿಂತನೆ ಶೇ. 85 ರಷ್ಟು ಪರಿಣಾಮ ಬೀರುತ್ತದೆ ಎಂದರು.
ನಾವು ನಮ್ಮನ್ನು ಪ್ರಪಂಚದ ಶ್ರೇಷ್ಠ ಸೃಷ್ಟಿಯೆಂದು ತಿಳಿದುಕೊಳ್ಳಬೇಕು. “ನಿನ್ನ ಹಾಗೆ ಹಿಂದೆ ಯಾರೂ ಹುಟ್ಟಲಿಲ್ಲ. ಮುಂದೆ ಯಾರೂ ಹುಟ್ಟಲಾರರು. ಕೋಟಿ ಹಣ ಖರ್ಚು ಮಾಡಿದರೂ ನಿನ್ನಂತೆ ಇನ್ನೊಬ್ಬರನ್ನು ಸೃಷ್ಟಿಸಲು ಸಾಧ್ಯವಿಲ್ಲ. ನಿನ್ನ ಬೆರಳಚ್ಚು ಜಗತ್ತಿನ ಇನ್ನಾರಲ್ಲೂ ಇಲ್ಲ. ನಿನಗೆ ನೀನೇ ಸಾಟಿ” ಎಂದರು.
ನಮ್ಮ ಜೀವನ ನಮ್ಮ ಯೋಚನೆಗಳಿಂದ ರೂಪಿತವಾಗುತ್ತದೆ. ನಮ್ಮ ಉನ್ನತಿಗಾಗಿ ನಾವೇ ಶ್ರಮಿಸಬೇಕು ಎಂದು ತಿಳಿಸಿದರು.
ಆಳ್ವಾಸ್ ಶಾಲೆಯ ಆಡಳಿತಾಧಿಕಾರಿ ಪ್ರೀತಮ್ ಕುಂದರ್, ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ವಿಜಯ ಟಿ. ಮೂರ್ತಿ, ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಉಮ ರುಫುಸ್ , ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್, ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿಧಿ ಯಳಚಿತ್ತಾಯ ಇದ್ದರು.
ವಿದ್ಯಾರ್ಥಿಗಳಾದ ಸಾನಿಕಾ ಆಳ್ವ ಮತ್ತು ಪುಷ್ಕಲ್ ನಿರೂಪಿಸಿದರು. ಶ್ರೀನಿಧಿ ಯಳಚಿತ್ತಾಯ ವಂದಿಸಿದರು.