ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ವರ್ಷ ಹೇನಬೇರಿನ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಅವರ ಕೊಲೆಯಾದಾಗ ಸ್ಥಳಕ್ಕೆ ಭೇಟಿನೀಡಿದ ಸಂಸದ ವೀರಪ್ಪ ಮೊಯಿಲಿ ಸೇರಿದಂತೆ ಎಲ್ಲ ಜನನಾಯಕರು ಹೇನಬೇರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುವ ಭರವಸೆಯಿತ್ತಿದ್ದರು. ಅದನ್ನು ಅನುಸರಿಸಿ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರಿಂದ ಡಾಂಬರು ರಸ್ತೆ ನಿರ್ಮಾಣವಾಗಿದೆ. ಸೋಲಾರ್ ದಾರಿದೀಪ ಅಳವಡಿಸಲಾಗಿದೆ. ಕುಡಿಯುವ ನೀರಿನ ಕೊರತೆ ನಿವಾರಿಸಲಾಗಿದೆ. ಅಕ್ಷತಾ ದೇವಾಡಿಗರ ಕುಟುಂಬಕ್ಕೆ ಪರಿಹಾರ ವಿತರಿಸಲಾಗಿದೆ. ಇದೀಗ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನು ಓಡಿಸಲಾಗುತ್ತಿದೆ. ಆ ಮೂಲಕ ಆಗ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಬೈಂದೂರು ಪ್ರಥಮ ದರ್ಜೆ ಕಾಲೇಜು ಮಾರ್ಗವಾಗಿ ಹೇನಬೇರು ಮತ್ತು ಕುಂದಾಪುರ ನಡುವೆ ಓಡಾಡಲಿರುವ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನು ಅವರು ಸೋಮವಾರ ಉದ್ಘಾಟಿಸಿ, ಮಾತನಾಡಿದರು.
ಎಲ್ಲರನ್ನು ಸ್ವಾಗತಿಸಿದ ಸಂಸ್ಥೆಯ ಕುಂದಾಪುರ ಡೀಪೊ ಮ್ಯಾನೇಜರ್ ಎಸ್. ತಾರಾನಾಥ್ ಕುಂದಾಪುರ ಶಿರೂರು ನಡುವೆ ಚಲಿಸುವ ಈ ಬಸ್ ಬೆಳಿಗ್ಗೆ 7:55ಕ್ಕೆ ಹೇನಬೇರಿಗೆ ಬರಲಿದೆ. ಅಲ್ಲಿಂದ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ತಲಪಿ 8:20ಕ್ಕೆ ಅಲ್ಲಿಂದ ಕುಂದಾಪುರಕ್ಕೆ ನಿರ್ಗಮಿಸಲಿದೆ. ಸಂಜೆ ಕುಂದಾಪುರದಿಂದ ಬೈಂದೂರು ಮಾರ್ಗವಾಗಿ 4:30ಕ್ಕೆ ಕಾಲೇಜಿಗೆ ತಲಪಿ 4:35ಕ್ಕೆ ಅಲ್ಲಿಂದ ಹೇನಬೇರಿಗೆ ನಿರ್ಗಮಿಸಲಿದೆ. ಈ ಬಸ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಜಗದೀಶ ದೇವಾಡಿಗ, ಗ್ರಾಮ ಪಂಚಾಯತ್ ಸದಸ್ಯ ವೆಂಕಟರಮಣ, ರಾಮಕೃಷ್ಣ, ಮಾಣಿಕ್ಯ, ತಿಮ್ಮಪ್ಪ, ಗಿರೀಶ ಬೈಂದೂರು, ನಾಗರಾಜ ಗಾಣಿಗ, ಎನ್. ನರಸಿಂಹ ದೇವಾಡಿಗ ಇದ್ದರು. ವೆಂಕಟರಮಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಣಿಕಂಠ ದೇವಾಡಿಗ ನಿರೂಪಿಸಿ ವಂದಿಸಿದರು. ಸಾರಿಗೆ ಸಂಸ್ಥೆಯ ಸಂಚಾರ ನಿರೀಕ್ಷಕ ದೇವಿದಾಸ ಬೋರ್ಕರ್, ಸಂಚಾರ ಆರಂಭಿಸಿದ ಬಸ್‌ನ ಚಾಲಕ ದತ್ತಾತ್ರೆಯ, ನಿರ್ವಾಹಕ ವೆಂಕಟರಮಣ ಪಟಗಾರ್ ಉಪಸ್ಥಿತರಿದ್ದರು. /ಕುಂದಾಪ್ರ ಡಾಟ್ ಕಾಂ ಸುದ್ದಿ./