Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸ್ವಾತಂತ್ರ್ಯದ ಒಕ್ಕೊರಲ ರಾಗ “ರಾಗ್ ದೇಶ್”
    ಲೇಖನ

    ಸ್ವಾತಂತ್ರ್ಯದ ಒಕ್ಕೊರಲ ರಾಗ “ರಾಗ್ ದೇಶ್”

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಶ್ರೇಯಾಂಕ್ ಎಸ್. ರಾನಡೆ | ಕುಂದಾಪ್ರ ಡಾಟ್ ಕಾಂ ಲೇಖನ.
    ಭಾರತ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು? ಈ ಪ್ರಶ್ನೆಯನ್ನು ನಿಮ್ಮ ಆಪ್ತರ, ಸಹೋದ್ಯೋಗಿಗಳ ಹಾಗೂ ಯಾವುದೇ ವಿದ್ಯಾರ್ಥಿಗಳ ಬಳಿ ಕೇಳಿ ನೋಡಿ. ಅದಕ್ಕೆ ನಿಮಗೆ ಸಿಗುವ ಉತ್ತರ ಗಾಂಧೀಜಿ ಕೇಂದ್ರಿತವಾಗಿರುತ್ತದೆ. ಖಂಡಿತವಾಗಿಯೂ ಸ್ವಾತಂತ್ರ್ಯ ಚಳುವಳಿಯ ಕೊನೆಯ ಘಟ್ಟದಲ್ಲಿ 1915-1947 ಗಾಂಧೀಜಿಯ ಪಾಲು ಬಹುಮುಖ್ಯವಾದದ್ದು. ಆದರೆ ಈ ದೇಶದ ಜನರ ಆಸ್ಥೆ, ಗಾಂಧೀಜಿಯ ಅಹಿಂಸಾ ಸತ್ಯಾಗ್ರಹ ಮಾತ್ರವೇ ದಪ್ಪ ಚರ್ಮದ ಬ್ರಿಟಿಷರ ಸೊಕ್ಕು ಮುರಿಯಲಿಲ್ಲ. ಅನೇಕ ಕ್ರಾಂತಿಕಾರಿಗಳು, ಸಣ್ಣ-ಪುಟ್ಟ ಹಳ್ಳಿ, ಪ್ರಾಂತ್ಯ-ಪ್ರದೇಶಗಳಲ್ಲಿ ರೈತ, ಬುಡಕಟ್ಟು ಹೀಗೆ ಅಸಂಖ್ಯಾತ ಜನರು ಆಗಾಗ್ಗೆ ಇಂಗ್ಲೀಷರ ಅಹಂಕಾರಕ್ಕೆ ಪೆಟ್ಟುಕೊಟ್ಟರೆ; ಹೊರಗಿನಿಂದ ನೇರವಾಗಿ ಹಾಗೂ ಒಳಗಿನಿಂದ ಪರೋಕ್ಷವಾಗಿ ಬ್ರಿಟಿಷರ ಸೊಕ್ಕನ್ನು, ಅವರ ಬೃಹತ್ ವಸಾಹತು ಸಾಮ್ರಾಜ್ಯದ ಅಸ್ಮಿತೆಯನ್ನೇ ಕಂಪಿಸುವಂತೆ ಮಾಡಿದ್ದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಹೊರಟಿದ್ದು ಸುಭಾಷ್ ಚಂದ್ರ ಬೋಸ್ರ ಇಂಡಿಯನ್ ನ್ಯಾಷನಲ್ ಆರ್ಮಿ.

    Click Here

    Call us

    Click Here

    ಆದರೆ ಐ.ಎನ್.ಎ ಸಾಗಿದ ಹಾದಿಯ ಪ್ರೇರಣೆ ಭಾರತದ ಉದ್ದಗಲಕ್ಕೂ ವ್ಯಾಪಿಸಿತ್ತು. ಶಾಂತಿಯಿಂದ ಕಾಯುತ್ತ ಕುಳಿತುಕೊಳ್ಳುವುದಕ್ಕಿಂತ ಸ್ವಾತಂತ್ರ್ಯವನ್ನು ಐ.ಎನ್.ಎ ಸೇನೆಯಂತೆ ಹೋರಾಡಿ ಪಡೆಯಬೇಕೆಂಬ ಹಂಬಲ, ತೀವ್ರತೆ ಎಲ್ಲೆಡೆ ವ್ಯಾಪಿಸತೊಡಗಿತು. ಉದಾಹರಣೆಗೆ ಅದರ ಒಂದು ಕಿಡಿ, ಮುಂಬಯಿ ತುಕಡಿಯ ‘ರಾಯಲ್ ಇಂಡಿಯನ್ ನೇವಿ’ ಫೆಬ್ರವರಿ 1946ರಲ್ಲಿ ಬ್ರಿಟಿಷ್ ಇಂಡಿಯಾದ ವಿರುದ್ಧ ಬಂಡಾಯ ಸಾರಿತು. ವೇತನ ತಾರತಮ್ಯ ಸೇರಿದಂತೆ ಅನೇಕ ಬಗೆಯ ದಬ್ಬಾಳಿಕೆಗಳಿಂದ ಬೇಸತ್ತಿದ್ದ ಇತರ ಸೇನಾ ತುಕಡಿಗಳು ಅದೇ ದಾರಿಯತ್ತ ಮುನ್ನುಗ್ಗುವ ಮುನ್ಸೂಚನೆ ನೀಡಿದ್ದವು.

    ಮಲಯ ದ್ವೀಪ ಸಮೂಹದಲ್ಲಿ ಬ್ರಿಟೀಷ್ ಭಾರತೀಯ ಸೇನೆಯ ಅಧಿಕಾರಿ ಮೋಹನ್ ಸಿಂಗ್ ಜಪಾನ್ ದೇಶದ ಸಹಾಯದಿಂದ ಅದರ ಬಳಿ ಯುದ್ಧದ ಬಂಧಿಯಾಗಿದ್ದ ಭಾರತೀಯ ಸೈನಿಕರನ್ನೊಳಗೊಂಡ ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಕಟ್ಟುತ್ತಾರೆ. ಸಿಂಗಾಪುರದ ಪತನದ ನಂತರ ಇನ್ನೂ 45,000 ಸೈನಿಕರು ಐ.ಎನ್.ಎ. ಸೇರಬಯಸಿದ್ದರು. 1942ರ ಹೊತ್ತಿಗೆ ಅದೊಂದು ಸಶಕ್ತ ಸೇನೆಯ ಸ್ವರೂಪ ಪಡೆಯುತ್ತದೆ. ಆದರೆ ಜಪಾನ್ಗೆ ಕೇವಲ 2,000 ಸೈನಿಕರ ತುಕಡಿಯ ಅಗತ್ಯವಿತ್ತು. ಆದರೆ ಮೋಹನ್ಸಿಂಗ್ ಬಯಸಿದ್ದು 2,00,00 ಸೈನಿಕರ ಸದೃಢ ಸೇನೆಯನ್ನು ಇದು ಜಪಾನ್ ಹಾಗೂ ಮೋಹನ್ ಸಿಂಗರ ನಡುವಿನ ಮನಸ್ತಾಪಕ್ಕೆ ಕಾರಣವಾಗಿತ್ತು. ಇದು ಐ.ಎನ್.ಎ ಬೆಳವಣಿಗೆಯ ಮೊದಲ ಹಂತ. ಕುಂದಾಪ್ರ ಡಾಟ್ ಕಾಂ ಲೇಖನ.

    ಎರಡನೇ ಹಂತದಲ್ಲಿ ಅದಕ್ಕೆ ದೊರೆತಿದ್ದು ಸಿಡಿಲಿನ ಕಿಡಿಯಂತೆ ಭಾರತವನ್ನು ಮುಕ್ತಿಗೊಳಿಸುವ ಸಂಕಲ್ಪ ತೊಟ್ಟಿದ್ದ ಅಪ್ರತಿಮ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್. ಕಾಂಗ್ರೆಸ್ ತ್ಯಜಿಸಿ 1940ರಲ್ಲಿ ಫಾರ್ವರ್ಡ್ ಬ್ಲಾಕ್ ರಚಿಸಿದ್ದ ಬೋಸ್ ಮಾರ್ಚ್ 1941ರಂದು ಭಾರತದಿಂದ ತಪ್ಪಿಸಿಕೊಂಡು ರಷ್ಯಾಗೆ, ಅಲ್ಲಿಂದ ಜರ್ಮನಿ ಹಾಗೂ ಕೊನೆಯಲ್ಲಿ 943ರಲ್ಲಿ ಜಪಾನ್ಗೆ ತೆರಳಿದ್ದರು. 1943ರಲ್ಲಿ ಸಿಂಗಾಪುರಕ್ಕೆ ಆಗಮಿಸಿದ್ದ ನೇತಾಜಿಗೆ ದೊರೆತಿದ್ದು ಕ್ರಾಂತಿಕಾರಿ ವರ್ಚಸ್ಸಿನ ರಾಶ್ಬಿಹಾರಿ ಬೋಸ್ ಮೊದಲಾದವರ ಸಂಘ. ಅಲ್ಲಿಂದ ಪ್ರಾರಂಭವಾಗಿದ್ದೇ ಐ.ಎನ್.ಎಯ ದ್ವಿತಿಯಾರ್ಧ ಅಥವಾ ಸುವರ್ಣ ಕಾಲಘಟ್ಟ. ಅಕ್ಟೋಬರ್ 1943ರಲ್ಲಿ ಬರ್ಮಾದ ರಂಗೂನ್ ಹಾಗೂ ಸಿಂಗಾಪುರಗಳಲ್ಲಿ ಪ್ರಾಂತೀಯ ಭಾರತೀಯ ಸರಕಾರವನ್ನು ರಚಿಸಲಾಯಿತು. ಬೋಸ್ 1944ರಲ್ಲಿ “ಸ್ವಾತಂತ್ರ್ಯಕ್ಕಾಗಿ ಭಾರತದ ಕೊನೆಯ ಯುದ್ಧ” ಎಂಬ ಘೋಷವಾಕ್ಯದೊಂದಿಗೆ ಭಾರತವನ್ನು ಹಿಂಪಡೆಯುವ ಉದ್ದೇಶದಿಂದ ಶಾ ನವಾಜ್ ನೇತೃತ್ವದ ಐ.ಎನ್.ಎ ತುಕಡಿಯನ್ನು ಜಪಾನ್ ಸೇನೆಯೊಂದಿಗೆ ಭಾರತ-ಬರ್ಮಾ ಗಡಿಯತ್ತ ಕಳುಹಿಸಲಾಯಿತು. ಅದೇ “ಇಂಫಾಲ್ ಕ್ಯಾಂಪೇನ್”. ಇದರಲ್ಲಿ ಜಪಾನ್ ಐ.ಎನ್.ಎಯನ್ನು ಬಹಳ ಹೀನವಾಗಿ ನಡೆಸಿಕೊಳ್ಳಲಾಯಿತು. ಜೊತೆಗೆ ಈ ಹೋರಾಟದಲ್ಲಿ ಐ.ಎನ್.ಎ ಹಾಗೂ ಜಪಾನ್ನ ಸೇನೆಗಳಿಗೆ ಸೋಲುಂಟಾಯಿತು. ಪರಿಣಾಮ ಬ್ರಿಟಿಷರಿಗೆ ಐ.ಎನ್.ಎ ಶರಣಾಗಬೇಕಾಯಿತು.

    ಬಂಧಿಸಿದ ಇಂಡಿಯನ್ ನ್ಯಾಷನಲ್ ಆರ್ಮಿಯ ಸೇನಾನಿಗಳ ಮೇಲೆ ಕೋರ್ಟ್ ಮಾರ್ಷಲ್ ನಡೆಯುತ್ತದೆ. ಆ ಸಂದರ್ಭದಲ್ಲಿ ಭಾರತದ ಉದ್ದಗಲಕ್ಕೂ “ಬಂಧಿತ ಸೈನಿಕರನ್ನು ವಿಮೋಚನೆಗೊಳಿಸಿ” ಎಂಬ ಆಂದೋಲನಗಳು ಏಕಧ್ವನಿಯಲ್ಲಿ ಮೇಳೈಸುತ್ತದೆ. ಇದೇ ರಾಗ್ ದೇಶ್ ಚಲನಚಿತ್ರದ ಮೂಲ ವಸ್ತು. ಸರಿ ಸುಮಾರು ಅದೇ ಹೊತ್ತಿಗೆ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಮಾಹಿತಿ ಎಲ್ಲೆಡೆ ಹರಡುತ್ತದೆ. ದೇಶದ ಹೊರಗಿದ್ದುಕೊಂಡು ಮಾಡಿದ ಇಂತಹ ಸಾಹಸಗಳಿಂದ ದೇಶದ ಒಳಗಿದ್ದವರೂ ಕೆಚ್ಚೆದೆಯಿಂದ ಎದ್ದು ನಿಲ್ಲುವಂತೆ ಮಾಡಿದ ಬೋಸ್ ಹಾಗೂ ಐ.ಎನ್.ಎ ಯಶೋಗಾಥೆ ರಕ್ತದ ಕಣ ಕಣವೂ ಪುಟಿದೇಳುವಂತೆ ಮಾಡುವಷ್ಟೇ ರೋಮಾಂಚಕಾರಿ, ಪರಿಣಾಮಕಾರಿ.

    Click here

    Click here

    Click here

    Call us

    Call us

    ***

    ದೇಶದ ನಾಡಿಮಿಡಿತವನ್ನು ಅರಿತ ಗಾಂಧೀಜಿ 1942ರಲ್ಲಿ ಭಾರತ ಬಿಟ್ಟು ತೊಲಗಿ, ಮಾಡು ಇಲ್ಲವೇ ಮಡಿ ಘೋಷಣೆ ನೀಡಿದ ಹೊರತಾಗಿಯೂ ಸ್ವಾತಂತ್ರ್ಯವೆಂಬುದು ಮರೀಚಿಕೆಯಾಗಿಯೇ ಉಳಿದಿತ್ತು. ಅದಕ್ಕೊಪ್ಪುವಂತೆ ಮುಸ್ಲಿಂ ಲೀಗ್ನ ದೇಶ ವಿಭಜನೆಯ ಕೂಗು, ಭಾರತೀಯ ನ್ಯಾಶನಲ್ ಕ್ರಾಂಗ್ರೆಸ್ನ ಆಂತರಿಕ ರಾಜಕಾರಣ, ಎರಡನೇ ಮಹಾಯುದ್ಧ.. ಹೀಗೆ ಎಲ್ಲವೂ ಸ್ವಾತಂತ್ರ್ಯದ ಸಿಗುವಿಕೆಯನ್ನು ದೂರೀಕರಿಸುತ್ತಿತ್ತು. ಇಂತಹ ಹತಾಶ ಸಂದರ್ಭದಲ್ಲಿ ಭಾರತೀಯರ ಮನಸ್ಥಿತಿಯಲ್ಲಿ ಹೊಸತೊಂದು ಆಶಾಕಿರಣ ಮತ್ತು ಚೇತೋಹಾರಿ ಲವಲವಿಕೆಯನ್ನು ಮೂಡಿಸಿದ್ದೂ ಐ.ಎನ್.ಎ.ಯ ಬಹುದೊಡ್ಡ ಸಾಧನೆ.

    ಸುಭಾಷ್ ಚಂದ್ರ ಬೋಸರ ಐ.ಎನ್.ಎ.ಗೆ ಇದ್ದ ವ್ಯಾಪಕ ಬೆಂಬಲ ಹಾಗೂ ಒಗ್ಗಟ್ಟಾದ ಭಾವನೆಗೆ ಕಾಂಗ್ರೆಸ್ ಕೂಡ ತಲೆಬಾಗಬೇಕಾಯಿತು. ಸೆಪ್ಟೆಂಬರ್ 1945ರಲ್ಲಿ ಮುಂಬಯಿಯಲ್ಲಿ ನಡೆದ ಅಖಿಲ ಭಾರತೀಯ ಕಾಂಗ್ರೆಸ್ ಸಮಾವೇಶದಲ್ಲಿ, ಇಂಡಿಯನ್ ನ್ಯಾಷನಲ್ ಆರ್ಮಿಯ ಬಂಧಿತ ಸಿಪಾಯಿಗಳಿಗೆ ಅಮೋಘ ಬೆಂಬಲ ವ್ಯಕ್ತವಾಯಿತು. ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ವಿಚಾರಣೆಯಲ್ಲಿ ಬಂಧಿತ ಸೈನಿಕರ ಪರ ವಾದ ಮಂಡಿಸಿ ಅವರನ್ನು ಬ್ರಿಟಿಷರು ನೀಡಲು ಇಚ್ಛಿಸಿದ್ದ ದೇಶದ್ರೋಹಿ, ರಾಜದ್ರೋಹಿ ಹಾಗೂ ಕೊಲೆ, ಸುಲಿಗೆಗಳ ಆರೋಪದಿಂದ ರಕ್ಷಿಸಲು ನಿರ್ಧರಿಸಲಾಯಿತು. ಭುಲಭಾಯಿ ದೇಸಾಯಿ, ತೇಜ್ ಬಹದ್ದೂರ್ ಸಫ್ರೂ, ಕೆ. ಎನ್. ಕಾಟ್ಜು, ಜವಹರಲಾಲ್ ನೆಹರು ಮತ್ತು ಅಸಫ್ ಅಲಿ ಕೆಂಪುಕೋಟೆಯ ಕೋರ್ಟ್ನಲ್ಲಿ ಬಂಧಿತರ ಪರ ವಾದ ಮಂಡಿಸಿದರು.

    ಕಾಂಗ್ರೆಸ್ ಇಡೀ ದೇಶದ ಮನಸ್ಥಿತಿಯನ್ನು ಸಾಂಸ್ಥಿಕಗೊಳಿಸುವ ದೃಷ್ಟಿಯಿಂದ ಐ.ಎನ್.ಎ. ಪರಿಹಾರ ಮತ್ತು ವಿಚಾರಣಾ ಸಮಿತಿಯನ್ನು ರಚಿಸಿತು. ಇದು ಆರ್ಥಿಕ ಹಾಗೂ ಸಾಮಜಿಕವಾಗಿ ಕಂಗೆಟ್ಟಿದ್ದ ಬಂಧಿತ ಐ.ಎನ್.ಎ ಸೈನಿಕರ ಬಿಡುಗಡೆಯ ತರುವಾಯ ಸಣ್ಣಮಟ್ಟಿಗೆ ಹಣ ಹಾಗೂ ಆಹಾರ ಒದಗಿಸಲು ನೆರವಾಯಿತು. ಜೊತೆಗೆ ಬಿಡುಗಡೆಯಾದ ಸೈನಿಕರಿಗೆ ಉದ್ಯೋಗ ಒದಗಿಸುವ ಭರವಸೆಯನ್ನೂ ಕಾಂಗ್ರೆಸ್ ನೀಡಿತು. ಭಾರತ ಬಿಟ್ಟು ತೊಲಗಿ ಹೋರಾಟದ ಫಲವಾಗಿ ಜೈಲು ಸೇರಿ ಆಗಷ್ಟೇ ಬಿಡುಗಡೆಯಾಗಿದ್ದ ಕಾಂಗ್ರೆಸ್ ನಾಯಕರಿಗೆ ಹಾಗೂ ರಾಜಕೀಯ ನಿಷೇಧವನ್ನು ಆಗಷ್ಟೇ ಕಳಚಿಕೊಂಡ ಕಾಂಗ್ರೆಸ್ಗೂ, 1945ರಲ್ಲಿ ಘೋಷಿಸಲ್ಪಟ್ಟ ಚುನಾವಣೆಗೆ ಬ್ರಿಟಿಷ್ ವಿರೋಧಿ ಅಲೆಯನ್ನು ಏಕೀಕೃತಗೊಳಿಸಲು ಐ.ಎನ್.ಎ ಸೈನಿಕರ ವಿಚಾರಣೆ ಪ್ರಮುಖಾಸ್ತ್ರವಾಯಿತು. ಅಂದಿನ ಚುನಾವಣೆಗೆ ಕಾಂಗ್ರೆಸ್ ಇದನ್ನೇ ಚುನಾವಣೆಯ ಲಾಭಕ್ಕಾಗಿ ಬಳಸಿಕೊಂಡಂತೆ ತೋರುತ್ತದೆ. ಯಾಕೆಂದರೆ 1945-46ರ ಚುನಾವಣಾ ಪ್ರಚಾರ ಸಭೆಗಳು ಹಾಗೂ ಐ.ಎನ್.ಎ ಸೈನಿಕರನ್ನು ಹೇಗೆ ರಕ್ಷಿಸಬೇಕೆಂಬ ಉದ್ದೇಶದಿಂದ ನಡೆಯುತ್ತಿದ್ದ ರಾಜಕೀಯೇತರ ಸಭೆಗಳೆರಡೂ ಒಂದೇ ಆಗಿರುತ್ತಿದ್ದವು. ಇದನ್ನು ಬಿಪಿನ್ ಚಂದ್ರ ಸೇರಿದಂತೆ ಅನೇಕ ಇತಿಹಾಸಕಾರರೂ ದಾಖಲಿಸಿದ್ದಾರೆ. (ಬಿಪಿನ್ ಚಂದ್ರ, ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್, ಪೋಸ್ಟ್ ವಾರ್ ಅಪ್ಸರ್ಜ್, ಪುಟ ಸಂಖ್ಯೆ: 476, 1989) ಕುಂದಾಪ್ರ ಡಾಟ್ ಕಾಂ ಲೇಖನ.

    ಚುನಾವಣೆಯ ಪ್ರಚಾರ ಸಭೆಗಳು ಬ್ರಿಟಿಷ್ ಅಧಿಕಾರಗಳ ದೌರ್ಜನ್ಯ, ಅದರಲ್ಲೂ ಮುಖ್ಯವಾಗಿ ಭಾರತ ಬಿಟ್ಟು ತೊಲಗಿ ಹೋರಾಟದ ಸಂದರ್ಭದಲ್ಲಿ ನಡೆಸಿದ ದಮನಕಾರಿ ಕೃತ್ಯಗಳನ್ನು ಟೀಕಿಸುವ ಹಾಗೂ ಹುತಾತ್ಮ ದೇಶಭಕ್ತರ ಬದುಕು-ಬಲಿದಾನಗಳನ್ನು ಸ್ಮರಿಸಿ, ವಿಜೃಂಭಿಸುವುದಕ್ಕೆ ವೇದಿಕೆಯಾದವು. ಮಾಡು ಇಲ್ಲವೆ ಮಡಿ ಎಂಬ ಘೋಷ ಹೊರಬಿದ್ದಾಗಲೇ ಬ್ರಿಟಿಷ್ ಸರಕಾರ ಕಾಂಗ್ರೆಸ್ನ ಮೇಲ್ಸ್ತರದ ನಾಯಕರನ್ನು ಬಂಧಿಸಿತ್ತು. ಆದರೆ 1942ರಿಂದ 1945ರವರೆಗೂ ಭಾರತದ ಪ್ರತೀ ಹಳ್ಳಿ-ನಗರಗಳಲ್ಲಿನ ಜನರು ನಾಯಕರ ಮಾರ್ಗದರ್ಶನದ ಹೊರತಾಗಿಯೂ ಪೌಢವಾಗಿ ತಾವೇ ಸಂಘಟಿತರಾಗಿ ಹೋರಾಟವನ್ನು ಮುಂದುವರೆಸಿದ್ದರು. ಮಹಾಯುದ್ಧದ ನಂತರ ಕಾಂಗ್ರೆಸ್ನ ನಾಯಕರು ಬಿಡುಗಡೆಯಾದಾಗಲೂ ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತಿದ್ದ ಜನರಲ್ಲಿ ಯಾವುದೇ ಹತಾಶೆ, ಬಳಲಿಕೆ, ಸೋಲಿನ ಭಯ ಇರಲಿಲ್ಲ. ಕೇವಲ ಸ್ವಾತಂತ್ರ್ಯದ ಕಿಚ್ಚು, ಆಸ್ಥೆ ಹಾಗೂ ಅದನ್ನು ಹೇಗಾದರೂ ಪಡೆದೇ ತೀರಬೇಕೆಂಬ ಹಂಬಲ ತೀವ್ರವಾಗಿರುವುದನ್ನು ಕಾಂಗ್ರೆಸ್ ಅರಿಯಿತು. ಹಾಗಾಗಿಯೇ ಬ್ರಿಟೀಷ್ ವಿರೋಧಿ ಭಾವನೆಯ ಜೊತೆಗೆ, ಶೋಷಿಸುತ್ತಿದ್ದ ಬ್ರಿಟಿಷರನ್ನು ಶಿಕ್ಷಿಸುವ ಭರವಸೆಯನ್ನು ಕಾಂಗ್ರೆಸ್ ನೀಡಿತು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದರೂ ವಾಸ್ತವದಲ್ಲಿ ಆ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲೇ ಇಲ್ಲ. ಯಾಕೆಂದರೆ ಚುನಾವಣೆಯ ನಂತರ ಬ್ರಿಟಿಷ್ ಸರಕಾರ ಕಾಂಗ್ರೆಸ್ನೊಂದಿಗೆ “ಸಂಭಾವಿತ ಒಪ್ಪಂದ”ವನ್ನು ಕೈಗೊಂಡಿತ್ತು!

    ಇದೆಲ್ಲದರ ಮಧ್ಯೆ ಜ್ವಾಲಾಮುಖಿಯ ಸ್ಫೋಟದಂತೆ ಗೋಚರವಾಗಿದ್ದು ಐ.ಎನ್.ಎ. ಯುದ್ಧದ ಸೆರೆಯಾಳುಗಳ ಕೋರ್ಟ್ ಮಾರ್ಷಲ್ ವಿಚಾರಣೆ. ಮೊದಲಿಗೆ ಎಲ್ಲರ ವಿಚಾರಣೆಯನ್ನು ಸಾರ್ವಜನಿಕವಾಗಿ ನಡೆಸಲು ಉದ್ದೇಶಿಸಿತು. ಜೊತೆಗೆ ಬ್ರಿಟಿಷ್ ಸರಕಾರ ನೂರಾರು ಐ.ಎನ್.ಎ. ಸೆರೆಯಾಳುಗಳನ್ನು ಅಂದರೆ ಬ್ರಿಟಿಷ್ ಭಾರತೀಯ ಸೇನೆಯ ಸಿಪಾಯಿಗಳನ್ನು ಕೆಲಸದಿಂದ ವಜಾಗೊಳಿಸಿ, ಸೆರೆಯಲ್ಲಿಟ್ಟಿತು. ಹಾಗೆಯೇ ಸೆರೆಯಾಗಿದ್ದ 7000 ಸೈನಿಕರನ್ನು ವಿಚಾರಣೆಗೊಳಪಡಿಸದೇ ಶಿಕ್ಷಿಸಲು ತೀರ್ಮಾನಿಸಿತ್ತು. ಅದರ ಪೂರ್ವಭಾವಿ ಮೊದಲ ನಡೆಯೆಂಬಂತೆ ನವೆಂಬರ್ 1945ರಲ್ಲಿ ಮೂವರು ಐ.ಎನ್.ಎ ಸೈನಿಕರನ್ನು ದೆಹಲಿಯ ಕೆಂಪುಕೋಟೆಯಲ್ಲಿ ವಿಚಾರಣೆಗೊಳಪಡಿಸಿತು. ಪ್ರೇಮ್ಕುಮಾರ್ ಸೆಹಗಲ್, ಶಾ ನವಾಜ್ ಖಾನ್, ಹಾಗೂ ಗುರ್ಭಕ್ಷ್ ಸಿಂಗ್ ಧಿಲ್ಲಾನ್ ಇವರೇ ಆ ಘಟನೆಯ ಮೂವರು ನಾಯಕರು. ಇವರೇ ಐ.ಎನ್.ಎ. ಹೋರಾಟದ ಧ್ಯೇಯೋದ್ದೇಶಗಳನ್ನು, ಹಾಕಿದ್ದ ಕೇಸುಗಳಿಗೆ ದೇಶಮೆಚ್ಚುವ ಸ್ಪಷ್ಟೀಕರಣವನ್ನು ನೀಡಿ ಆ ಹೊತ್ತಿಗೆ ವಿಮಾನ ಅಪಘಾತದಲ್ಲಿ ಸತ್ತಿರಬಹುದೆನ್ನಲಾಗಿದ್ದ ಕ್ರಾಂತಿಕಾರಿ ಸುಭಾಷ್ ಚಂದ್ರ ಬೋಸರ “ಇಡೀ ದೇಶವನ್ನು ದಾಸ್ಯದಿಂದ ಮುಕ್ತಗೊಳಿಸುವ ಸಂದೇಶವನ್ನು ಮತ್ತೊಮ್ಮೆ ದೇಶದ ಇಕ್ಕೆಲಗಳಿಗೂ ತಲುಪುವಂತೆ ಪುನರುಚ್ಛರಿಸಿದವರು.

    ಬ್ರಿಟೀಷರು ಬೇಕೆಂದೇ ಹಿಂದೂ, ಮುಸ್ಲಿಂ ಹಾಗೂ ಸಿಖ್ಖ್ ಸಮುದಾಯದ ಒಬ್ಬೊಬ್ಬ ಸೈನಿಕನನ್ನು ಆರಿಸಿಕೊಂಡಿದ್ದರು. ಆದರೆ ಈ ಕ್ರಮದಿಂದ ಮೂರೂ ಸಮುದಾಯದವರು ಆಂತರಿಕವಾಗಿ ಕಚ್ಚಾಡುವ ಬದಲು ಏಕತೆಯಿಂದ ಒಟ್ಟಾದರು. ದೇಶದಾದ್ಯಂತ ಅವರ ಬಿಡುಗಡೆಗೆ ಕೂಗು ಹೆಚ್ಚಾಯಿತು. ಜನಸಾಮಾನ್ಯರಲ್ಲಿ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಹೊಸತೊಂದು ಸಂಚಲನ ದೊರೆಯಿತು. ಎಲ್ಲಾ ಭಾಷೆಗಳ ಮಾಧ್ಯಮಗಳು ಇದರ ತೀವ್ರತೆ, ಗಂಭೀರತೆ ಹಾಗೂ ಆನ್ವಯಿಕತೆಯನ್ನು ಮೂಲೆಮೂಲೆಗಳಿಗೂ ವಿಸ್ತರಿಸಿದವು. ಇದರಿಂದ ವ್ಯಾಪಕ ಸಾರ್ವಜನಿಕ ಬೆಂಬಲ ವ್ಯಕ್ತವಾಯಿತು. ಆದರೆ ಇಲ್ಲಿ ವ್ಯಕ್ತವಾದ ಹಿಂದೂ-ಮುಸ್ಲಿಂರ ಏಕತೆ ಕೇವಲ ಸಾಮಯಿಕ ಅನಿವಾರ್ಯತೆಯಂತೆ ತೋರಿತೇ ವಿನಹಃ, ಶಾಶ್ವತ ಸಾಂಸ್ಥಿಕತೆಯಾಗಿ ಉಳಿಯಲಿಲ್ಲ.

    ಐ.ಎನ್.ಎ ಚಳುವಳಿ ಎಷ್ಟರ ಮಟ್ಟಿಗೆ ಗುರುತರವಾಯಿತೆಂದರೆ, ದೇಶಾದ್ಯಂತ 12 ನವೆಂಬರ್ 1945ನ್ನು “ಐ.ಎನ್.ಎ. ದಿನ”ವನ್ನಾಗಿಯೂ, 5-11 ನವೆಂಬರ್ 1945ನ್ನು “ಐ.ಎನ್.ಎ ವಾರ”ವನ್ನಾಗಿ ರಾಷ್ಟ್ರೀಯ ಹಬ್ಬವೆಂಬಂತೆ ಆಚರಿಸಲಾಯಿತು. ಇದನ್ನು ತಡೆಗಟ್ಟುವುದು ಬ್ರಿಟಿಷರಿಗೆ ಅಸಾಧ್ಯವಾಯಿತು. ಇನ್ನು ಹೆಚ್ಚು ಕಾಲ ಭಾರತವನ್ನು ದಾಸ್ಯದ ಬಲೆಯಲ್ಲಿ ಬಂಧಿಸಿಡುವುದು ಕಷ್ಟ ಎಂಬುದು ಬ್ರಿಟನ್ನಲ್ಲಿ ಹೊಸದಾಗಿ ಆರಿಸಿ ಬಂದಿದ್ದ ಲೇಬರ್ ಸರಕಾರಕ್ಕೆ ಅರಿವಾಯಿತು. ಕುಂದಾಪ್ರ ಡಾಟ್ ಕಾಂ ಲೇಖನ.

    ಅದಕ್ಕೆ ಪೂರಕವಾಗಿ ದಕ್ಷಿಣ, ಆಗ್ನೇಯ ಏಷ್ಯಾಗಳಲ್ಲಿ ತೀವ್ರವಾಗಿದ್ದ ನಿಯಂತ್ರಿಸಲಾಗದ ಸಾಮ್ರಾಜ್ಯಶಾಹಿ ವಿರೋಧಿ ಅಲೆ; ಮೇಲಾಗಿ ಎರಡನೇ ಮಹಾಯುದ್ಧ ಅಧಿಕಾರ ಸಮತೋಲನದ ಪುನರ್ರಚನೆಯಲ್ಲಿ ಬ್ರಿಟನ್ ವಿಶ್ವದ ಮಹಾನ್ ಶಕ್ತಿಯಾಗಿ ಉಳಿದಿರಲಿಲ್ಲ. ಆ ಸ್ಥಾನವನ್ನು ಅಮೆರಿಕ ಅಲಂಕರಿಸಿಬಿಟ್ಟಿತ್ತು. ಇವೆಲ್ಲದರ ಪರಿಣಾಮ ಹೇಗಾದರೂ ಬಿಟ್ಟು ಹೋಗಲೇ ಬೇಕು. ಅಧಿಕಾರದ ವರ್ಗಾವಣೆಯನ್ನು ಇನ್ನಷ್ಟು ತಡಮಾಡಿ, ಇದ್ದಷ್ಟು ಸಮಯ ಉಳಿದಷ್ಟನ್ನು ಲೂಟಿ ಮಾಡಿ, ಭಾರತೀಯರನ್ನು ಆಂತರಿಕ ಕಚ್ಚಾಟದಲ್ಲಿ ಸಿಲುಕಿಸಿ, ದೇಶ ವಿಭಜಿಸಿ ಹೋಗುವುದು ಬ್ರಿಟನ್ನ ದೂರಗಾಮಿ ಉದ್ದೇಶವಾಯಿತು.

    ದೆಹಲಿ, ಮುಂಬಯಿ, ಕಲ್ಕತ್ತ, ಮದ್ರಾಸ್, ಉತ್ತರ ಪ್ರದೇಶ ಮತ್ತು ಪಂಜಾಬ್ ಐ.ಎನ್.ಎ ಆಂದೋಲನದ ಕೇಂದ್ರಸ್ಥಾನಗಳಾದವು. ಅಷ್ಟಕ್ಕೇ ಸೀಮಿತಗೊಳ್ಳದ ಆಂದೋಲನವು ಕರ್ನಾಟಕದ ಕೊಡಗಿನಲ್ಲಿ, ಇಂದಿನ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಬಲೂಚಿಸ್ತಾನದಲ್ಲಿ ಹಾಗೂ ಈಶಾನ್ಯದ ಅಸ್ಸಾಂನಲ್ಲಿಯೂ ವ್ಯಾಪಕ ಬೆಂಬಲದೊಂದಿಗೆ ಯಶಸ್ವಿಯಾಗಿ ನಡೆದವು. ಶ್ರೀಮಂತರಿಂದ ಬಡವರವರೆಗೂ, ಅವಿಭಜಿತ ಭಾರತದಾದ್ಯಂತ “ಬಂಧಿತ ಸೈನಿಕರನ್ನು ಬಿಡುಗಡೆಗೊಳಿಸಿ” ಎಂಬ ಏಕೈಕ ಕೂಗು ಮಾರ್ದನಿಸುತ್ತಿತ್ತು. ವಿದೇಶಗಳಲ್ಲಿ ನೆಲೆಸಿದ್ದ ಭಾರತೀಯರು, ಸರಕಾರಿ ಉದ್ಯೋಗಿಗಳು, ದೇವಾಲಯ, ಗುರುದ್ವಾರಗಳು, ಅಷ್ಟೇ ಅಲ್ಲದೆ ಟಾಂಗಾ ನಡೆಸುವವರು ಕೂಡ ತಾವು ಉಳಿಸಿಟ್ಟಿದ್ದ ದುಡ್ಡನ್ನು ಐ.ಎನ್.ಎ. ಪರಿಹಾರ ನಿಧಿಗೆ ನೀಡಿದರು. ವಿದ್ಯಾರ್ಥಿಗಳು ತರಗತಿಗಳನ್ನು ತ್ಯಜಿಸಿ ಸಂಘಟಿತರಾದರೆ, ಕಿಸಾನ್, ಮಹಿಳಾ ಸಭಾಗಳು ಒಟ್ಟಾಗಿ ಐ.ಎನ್.ಎ ಸೈನಿಕರ ಬಿಡುಗಡೆಗೆ ಒತ್ತಾಯಿಸಿದವು. ಗಾಂಧೀಜಿಯಂತಹ ಪ್ರಮುಖ ನಾಯಕರ ಪಾಲ್ಗೊಳ್ಳದಿರುವಿಕೆಯ ಹೊರತಾಗಿಯೂ ಈ ಆಂದೋಲನ ವ್ಯಾಪಕವಾಗಿ ಯಶಸ್ವಿಯಾಗುವುದಕ್ಕೆ ಬದಲಾಗುತ್ತಿದ್ದ ಭಾರತದ ಮನೋಧರ್ಮವೇ ಕಾರಣ.

    ಈ ಎಲ್ಲಾ ಬೆಳವಣಿಗೆಗಳ ನಡುವೆ 1945-46ರಲ್ಲಿ ಮೂರು ಮುಖ್ಯ ಬೆಳವಣಿಗೆಗಳು ಬ್ರಿಟಿಷರ ಚಿಂತಣಾಕ್ರಮವನ್ನೇ ಬದಲಿಸಿದವು.
    1. 21 ನವೆಂಬರ್ 1945ರಲ್ಲಿ ಕಲ್ಕತ್ತದಲ್ಲಿ ವಿದ್ಯಾರ್ಥಿ ಸಮುದಾಯ ಯಾವುದೇ ಭಯವಿಲ್ಲದಂತೆ ಸಂಘಟಿತವಾಗಿ ನಡೆಸಿದ ಹೋರಾಟ ಮತ್ತು ಅದನ್ನು ಪೋಲಿಸರು ಹಿಂಸಾತ್ಮಕವಾಗಿ ನಿಯಂತ್ರಿಸಿದರು.
    2. 11 ಫೆಬ್ರವರಿ 1946ರಂದು ಐ.ಎನ್.ಎ. ಅಧಿಕಾರಿ ರಶೀದ್ ಅಲಿಗೆ 7 ವರ್ಷದ ಶಿಕ್ಷೆ ವಿಧಿಸಿದ ಪರಿಣಾಮ ಕಲ್ಕತ್ತದಲ್ಲಿ ನಡೆದ ಪ್ರತಿಭಟನೆ ಹಾಗೂ ಹಿಂಸಾಚಾರದ ನಿಯಂತ್ರಣ.
    ಇವಕ್ಕಿಂತ ಮುಖ್ಯವಾಗಿ 3. 18 ಫೆಬ್ರವರಿ 1946ರಲ್ಲಿ ಮುಂಬಯಿಯಲ್ಲಿ ತಮ್ಮ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಹಿಂಸಾಚಾರದ ವಿರುದ್ಧ 1100 ನೇವಲ್ ರೇಟಿಂಗ್ಸ್ ಹೆಎಂಐಎಸ್ ತಲ್ವಾರ್ನ ತುಕಡಿ ಪ್ರತಿಭಟನೆಗಿಳಿಯಿತು. ಇದು ವಾಸ್ತವವಾಗಿ ಸೇನಾ ಬಂಡಾಯದ ಲಕ್ಷಣವೆಂಬಂತೆ ನಿಯಂತ್ರಣಕ್ಕೆ ಒದಗದ ಸ್ಥಿತಿಗೆ ತಲುಪಿತು.

    ಈಗ ಭಾರತಕ್ಕೆ 1920ರ ತಾಳ್ಮೆ ಉಳಿದಿರಲಿಲ್ಲ. ಸ್ವಾತಂತ್ರ್ಯದ ಸ್ವೀಕೃತಿಗಾಗಿ ಭಾರತೀಯರು ಆಂತರಿಕ ಯುದ್ಧಕ್ಕೂ ತಯಾರಾದಂತೆ ತೋರುತ್ತಿತ್ತು. ಈ ಎಲ್ಲ ನಿಯಮಗಳ ಪರಿಣಾಮ ಇನ್ನು ಹೆಚ್ಚು ಕಾಲ ದಮನ ಸಾಧ್ಯವಿಲ್ಲ ಎಂಬುದನ್ನು ಮನಗಂಡ ಬ್ರಿಟಿಷ್ ಸರಕಾರ ತನ್ನ ಎಂದಿನ “ಕ್ಯಾರೆಟ್ ಮತ್ತು ಸ್ಟಿಕ್(ಕೋಲು)” ನಿಯಮಕ್ಕೆ ನಾಂದಿ ಹಾಡಿತು. ಮೊದಲಿಗೆ ಕ್ಯಾರೆಟ್ ರೂಪದಲ್ಲಿ 1 ಡಿಸೆಂಬರ್ 1946ರಂದು “ಕೇವಲ ಕೊಲೆ ಅಥವಾ ಹಿಂಸಾತ್ಮಕ ಚಟುವಟಿಕೆಗಳನ್ನು ಕೈಗೊಂಡವರನ್ನು ಮಾತ್ರ ವಿಚಾರಣೆಗೊಳಪಡಿಸಲಾಗುವುದು” ಎಂದು ಘೋಷಿಸಿತು. ಎರಡನೆಯದಾಗಿ ಮೊದಲ ಹಂತದಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿದ್ದ ಸೈನಿಕರ ಶಿಕ್ಷೆಯನ್ನು ಜನವರಿ 1947ರಲ್ಲಿ ತೆಗೆದುಹಾಕಲಾಯಿತು. 1947ರ ಫೆಬ್ರವರಿಯಲ್ಲಿ ಭಾರತ-ಚೀನಾ ಹಾಗೂ ಇಂಡೋನೇಷಿಯಾ ಗಡಿಯಿಂದ ಭಾರತೀಯ ಸೈನಿಕರನ್ನು ತೆರವುಗೊಳಿಸಲಾಯಿತು. ಸ್ವಾತಂತ್ರಯ ನೀಡುವ ಹೊಸ ಭರವಸೆಯಿಂದ ಭಾರತಕ್ಕೆ 1946ರಲ್ಲಿ ಮೂವರು ಸದಸ್ಯರ ಬ್ರಿಟನ್ ಪಾರ್ಲಿಮೆಂಟಿನ ನಿಯೋಗ ಕ್ಯಾಬಿನೆಟ್ ಮಿಶನ್ಅನ್ನು ಭಾರತಕ್ಕೆ ಕಳುಹಿಸಲಾಯಿತು. ಕೋಲಿನ ರೂಪದಲ್ಲಿ ಭಾರತ ವಿಭಜನೆಗೆ ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸಿಟ್ಟಿತು. ಉಳಿದದ್ದು ಬದಲಿಸಲಾಗದ ಇತಿಹಾಸ.

    ಈ ಚಿತ್ರ ಸುಭಾಷ್ಚಂದ್ರ ಬೋಸ್ ನೇತೃತ್ವದ ಇಂಡಿಯಾನ್ ನ್ಯಾಷನಲ್ ಆರ್ಮಿ ಹೋರಾಡಿದ ಬಗೆ ಹಾಗೂ ಎರಡನೇ ವಿಶ್ವಯುದ್ಧದ ಜರ್ಮನಿ, ಜಪಾನ್ ಸೋಲಿನ ತರುವಾಯ ಶರಣಾದ ಐ.ಎನ್.ಎ ಹಾಗೂ ಮುಖ್ಯ ಆರೋಪಗಳನ್ನು ಹೊತ್ತ ಮೂವರು ಸೈನಿಕರ ಕೋರ್ಟ್ಮಾರ್ಷಲ್ ವಿಚಾರಣೆಯನ್ನು ಚಿತ್ರಿಸಿದೆ. ತೀರಾ ವಿರಳವಾಗಿ ರೂಪುಗೊಳ್ಳುವ ಇಂತಹ ಚಿತ್ರಗಳು ವೈಭವೀಕರಣಕೊಂಡಿರುವ ಕೆಲವೇ ಕೆಲವು ಘಟನೆಗಳಿಂದ ಇತರ ಸಂಗತಿಗಳತ್ತವೂ ಮುಖಮಾಡುವಂತೆ ನಮ್ಮನ್ನು ಪ್ರೇರೇಪಿಸುತ್ತವೆ. ಆ ಕಾರಣದಿಂದ ನಾವು ಅವಗಾಹಿಸದ ಸ್ವಾತಂತ್ರ್ಯ ಹೋರಾಟದ ಮುಖ್ಯ ಮಜಲಿನ ವಸ್ತುರೂಪಕವನ್ನು ನಮ್ಮೆದುರಿಗಿಡುವ ಪ್ರಯತ್ನ ಮಾಡುತ್ತದೆ. ಒಂದು ರೀತಿಯಲ್ಲಿ ಐತಿಹಾಸಿಕ ಐ.ಎನ್.ಎ ಬೆಳವಣಿಗೆ, ಹೋರಾಟ, ಔನತ್ಯ ಹಾಗೂ ಶರಣಾಗತಿ ಹೊಂದಿ ವಿಚಾರಣೆಗೆ ಒಳಪಡುವ ಅವನತಿಯ ಅಥವಾ ಇಂತಹ ಒಂದು ಕಾರಣದಿಂದಲೇ ಮತ್ತೆ ದೇಶವನ್ನು ಬಡಿದೆಚ್ಚರಿಸುವ ಚಾರಿತ್ರಿಕ ಸನ್ನಿವೇಶದ ದಾಖಲೀಕರಣ. ಚರಿತ್ರೆಯ ಬರಹದಲ್ಲಿ ಪ್ರಜ್ಞಾಪೂರ್ವಕವಾಗಿ ಪೋಷಕ ಸ್ಥಾನಕ್ಕೆ ಸೇರಿದ ಪ್ರಮುಖ ಸಂಗತಿಯೊಂದರ ಮುಖ್ಯಭೂಮಿಕೆ ಮತ್ತು ಆಮುಖೇನ ಅಂದಿನ ಕಾಲಘಟ್ಟವನ್ನು ಪುನರ್ದರ್ಶಿಸುವ ಪ್ರಯತ್ನವಿದು.

    ***

    ರಾಗ ದ್ವೇಷ ಹೊಸ ರಾಗ: ಹಿಂದಿ ವಿರೋಧಿಗಳಿಗೆ ಇಷ್ಟವಿಲ್ಲದಿದ್ದರೆ ಕನ್ನಡಕ್ಕೆ ಡಬ್ಬಿಂಗ್ ಬಂದ ಮೇಲೆ ಈ ಚಿತ್ರ ನೋಡುವುದು ಒಳಿತು. ಯಾಕೆಂದರೆ ಈ ಚಿತ್ರವನ್ನು ಹಿಂದಿಯಲ್ಲಿ ನೋಡುವುದರಿಂದ ನಮ್ಮ ಮೇಲೆ ಹಿಂದಿಯನ್ನು ಹೇರಿಕೊಂಡಂತಾಗುತ್ತದೆ ಎಂಬ ಸಂಕುಚಿತ ರಾಗ-ದ್ವೇಷ ಬಿಟ್ಟರೆ ನಮ್ಮ ದೇಶಕ್ಕಾಗಿ ಹೋರಾಡಿದ, ನಮ್ಮ ಇತಿಹಾಸ ಪಠ್ಯಗಳಲ್ಲಿ ಅವಧಾರಣಿಸದ ಭಾರತ ಸ್ವಾತಂತ್ರ್ಯ ಸಂಗ್ರಾಮದ ಒಂದು ಬಹುಮುಖ್ಯ ಘಟ್ಟವನ್ನು ತಿಳಿದುಕೊಳ್ಳುವ ಅವಕಾಶಕ್ಕೆ ನಾವು ತೆರೆದುಕೊಂಡಂತಾಗುತ್ತದೆ.

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶರನ್ನವರಾತ್ರಿ: ದೇವಿಯ ಒಂಭತ್ತು ಸ್ವರೂಪಗಳ ಮಹತ್ವ

    22/09/2025

    ಬೆಳಕ ಚಿತ್ರಿಸಿದ ಕ್ಷಣಗಳ ಹಬ್ಬ – ವಿಶ್ವ ಛಾಯಾಗ್ರಹಣ ದಿನ

    19/08/2025

    ಮುಖದ ಸೌಂದರ್ಯ ಹೆಚ್ಚಿಸಲು ಫೇಶಿಯಲ್‌ ಯೋಗ ಎಂಬ ಟ್ರೆಂಡ್

    11/04/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d