ಅಶ್ವಯುಜ ಮಾಸದ ಪ್ರಾರಂಭದಲ್ಲಿ ಹತ್ತು ದಿನಗಳ ಕಾಲ ಆಚರಿಸುವ ಹಬ್ಬವೇ ನವರಾತ್ರಿ. ಚಾಂದ್ರಮಾನ ಪಂಚಾಂಗರೀತ್ಯ ಶಾರದ ಋತುವಿನ ಮೊದಲ 9 ದಿನಗಳಲ್ಲಿ ಈ ಹಬ್ಬವನ್ನು ಆಚರಿಸುವುದರಿಂದ ಇದನ್ನು ಶರನ್ನವರಾತ್ರಿ ಎಂದೂ ಕರೆಯುತ್ತಾರೆ.
ನವರಾತ್ರಿಯ ಈ ಒಂಭತ್ತು ದಿನಗಳು ದೇವಿಯ ಒಂಭತ್ತು ಸ್ವರೂಪಗಳ ಆರಾಧನೆಯಾಗಿರುತ್ತದೆ. ದೇವಿಯ ಪ್ರತಿಯೊಂದು ಸ್ವರೂಪದ ಆರಾಧನೆಯಿಂದ ವಿಶಿಷ್ಟ ಫಲಗಳನ್ನು ಪಡೆಯಬಹುದಾಗಿದೆ. ದೇವಿಯ ಸ್ವರೂಪಗಳನ್ನು ಅತ್ಯಂತ ಶ್ರದ್ಧೆಯಿಂದ ಆರಾಧಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
ಶೈಲಪುತ್ರಿ:
ನವರಾತ್ರಿಯ ಮೊದಲನೇ ದಿನ ಘಟಸ್ಥಾಪನೆಯ ಜೊತೆಗೆ ಶೈಲಪುತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಹಿಮಾಲಯ ರಾಜನ ಪುತ್ರಿಯಾದ ಕಾರಣ ಈ ದೇವಿಯನ್ನು ಶೈಲಪುತ್ರಿ ಎಂದು ಕರೆಯಲಾಗುತ್ತದೆ. ಶೈಲಪುತ್ರಿಯು ವೃಷಭವನ್ನೇರಿ ಬರುತ್ತಾಳೆ ಮತ್ತು ಎಡಗೈಯಲ್ಲಿ ಕಮಲ, ಬಲಗೈಯಲ್ಲಿ ತ್ರಿಶೂಲವನ್ನು ಹಿಡಿದಿರುತ್ತಾಳೆ. ನವರಾತ್ರಿಯ ಮೊದಲ ದಿನ ದೇವಿಯ ಆರಾಧಕರ ಮನಸ್ಸು ಮೂಲಾಧಾರ ಚಕ್ರದಲ್ಲಿ ಸ್ಥಿತವಾಗಿರುತ್ತದೆ.
ಬ್ರಹ್ಮಚಾರಿಣಿ:
ನವರಾತ್ರಿಯ ಎರಡನೇ ದಿನ ದೇವಿ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ತಪಸ್ಸನ್ನು ಕಟ್ಟುನಿಟ್ಟಾಗಿ ಆಚರಿಸಿರುವ ಕಾರಣದಿಂದ ಬ್ರಹ್ಮಚಾರಿಣಿ ಎಂದು ಕರೆಯಲಾಗುತ್ತದೆ. ತೇಜೋಮಯ ಸ್ವರೂಪವುಳ್ಳ ದೇವಿಯು ಬಲಗೈಯಲ್ಲಿ ಕಮಂಡಲವನ್ನು, ಎಡಗೈಯಲ್ಲಿ ಜಪಮಾಲೆಯನ್ನು ಹಿಡಿದು ಭವ್ಯರೂಪದಲ್ಲಿ ಕಂಗೊಳಿಸುತ್ತಾಳೆ. ನವರಾತ್ರಿಯ ಎರಡನೇ ದಿನ ದೇವಿಯ ಆರಾಧಕರ ಮನಸ್ಸು ಸ್ವಾಧಿಷ್ಟಾನ ಚಕ್ರದಲ್ಲಿ ಸ್ಥಿತವಾಗಿರುತ್ತದೆ.
ಚಂದ್ರಘಂಟಾ:
ಚಂದ್ರಘಂಟಾ ದೇವಿಯನ್ನು ನವರಾತ್ರಿಯ ಮೂರನೇ ದಿನ ಪೂಜಿಸಲಾಗುತ್ತದೆ. ಹಣೆಯಲ್ಲಿ ಅರ್ಧಚಂದ್ರಾಕೃತಿಯನ್ನು ಧರಿಸಿರುವ ಕಾರಣ ಚಂದ್ರಘಂಟಾ ಎಂದು ಕರೆಯುತ್ತಾರೆ. ಈ ದೇವಿಯ ಘಂಟೆಯ ಧ್ವನಿಯಿಂದ ದುಷ್ಟಶಕ್ತಿಗಳೆಲ್ಲ ಹೆದರಿ ನಾಶವಾಗುತ್ತವೆ. ಸಿಂಹದ ಮೇಲೇರಿ ಬರುವ ದೇವಿಯ ಶರೀರವು ಸ್ವರ್ಣದಂತೆ ಕಂಗೊಳಿಸುತ್ತದೆ. ನವರಾತ್ರಿಯ ಮೂರನೇ ದಿನ ದೇವಿಯ ಆರಾಧಕರ ಮನಸ್ಸು ಮಣಿಪುರ ಚಕ್ರದಲ್ಲಿ ಸ್ಥಿತವಾಗಿರುತ್ತದೆ
ಕೂಷ್ಮಾಂಡಾ
ನವರಾತ್ರಿಯ ನಾಲ್ಕನೇ ದಿನ ದೇವಿಯ ಕೂಷ್ಮಾಂಡಾ ಸ್ವರೂಪವನ್ನು ಪೂಜಿಸಲಾಗುತ್ತದೆ. ಸೃಷ್ಟಿಯಲ್ಲಿ ಎಲ್ಲೆಡೆ ಅಂಧಕಾರವಿದ್ದ ಸಮಯದಲ್ಲಿ ತನ್ನ ಮಂದಹಾಸದಿಂದ ಬ್ರಹ್ಮಾಂಡವನ್ನು ರಚಿಸಿರುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ ದೇವಿಯ ಈ ಸ್ವರೂಪವನ್ನು ಕೂಷ್ಮಾಂಡಾ ಎಂದು ಕರೆಯುತ್ತಾರೆ. ನವರಾತ್ರಿಯ ನಾಲ್ಕನೇ ದಿನ ದೇವಿಯ ಆರಾಧಕರ ಮನಸ್ಸು ಅನಾಹತ ಚಕ್ರದಲ್ಲಿ ಸ್ಥಿತವಾಗಿರುತ್ತದೆ.
ಸ್ಕಂದಮಾತಾ:
ನವರಾತ್ರಿಯ ಐದನೇ ದಿನ ದೇವಿ ದುರ್ಗೆಯನ್ನು ಸ್ಕಂದಮಾತೆಯ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ನಾಲ್ಕು ಭುಜವುಳ್ಳ ತಾಯಿಯ ಬಲಬದಿಯ ಮೇಲಿನ ಭುಜದಿಂದ ಪುತ್ರ ಸ್ಕಂದನನ್ನು ಹಿಡಿದಿರುತ್ತಾಳೆ. ಕೆಳಗಿನ ಭುಜದಲ್ಲಿ ಕಮಲವನ್ನು, ಎಡಬದಿಯ ಮೇಲಿನ ಭುಜದಲ್ಲಿ ಆಶೀರ್ವಾದ ಮುದ್ರೆಯನ್ನು, ಕೆಳಗಿನ ಭುಜದಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಈ ಸ್ವರೂಪದ ಆರಾಧನೆಯಿಂದ ಸಕಲ ಸುಖವನ್ನು ಪಡೆಯಬಹುದಾಗಿದೆ. ನವರಾತ್ರಿಯ ಐದನೇ ದಿನ ದೇವಿಯ ಆರಾಧಕರ ಮನಸ್ಸು ವಿಶುದ್ಧ ಚಕ್ರದಲ್ಲಿ ಸ್ಥಿತವಾಗಿರುತ್ತದೆ
ಕಾತ್ಯಾಯನಿ:
ನವರಾತ್ರಿಯ ಆರನೇ ದಿನ ದೇವಿಯ ಕಾತ್ಯಾಯನಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಕಾತ್ಯಾಯನ ಋಷಿಯ ಆಶ್ರಮದಲ್ಲಿ ಜನ್ಮತಾಳಿದ ಕಾರಣ ಕಾತ್ಯಾಯನಿ ಎಂದು ಕರೆಯಲಾಗುತ್ತದೆ. ನವರಾತ್ರಿಯ ಆರನೇ ದಿನ ದೇವಿಯ ಆರಾಧಕರ ಮನಸ್ಸು ಆಜ್ಞಾ ಚಕ್ರದಲ್ಲಿ ಸ್ಥಿತವಾಗಿರುತ್ತದೆ. ಈ ದಿನದಂದು ಆರಾಧಕರು ಅಲೌಕಿಕ ತೇಜಸ್ಸನ್ನು ಹೊಂದುತ್ತಾರೆ.
ಕಾಳರಾತ್ರಿ:
ನವರಾತ್ರಿಯ ಏಳನೇ ದಿನ ದೇವಿಯ ಕಾಳರಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಈ ದೇವಿಯ ಸ್ವರೂಪ ಅತ್ಯಂತ ಭಯಾನಕವಾಗಿದ್ದರೂ, ಈಕೆಯ ಆರಾಧನೆಯಿಂದ ಶುಭಫಲವನ್ನು ಪಡೆಯಬಹುದಾಗಿದೆ. ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ದೇವಿಯ ಈ ಸ್ವರೂಪ ಜಗತ್ತಿಗೆ ಕಲ್ಯಾಣಕಾರಿ ಎಂದು ಹೇಳಲಾಗುತ್ತದೆ. ನವರಾತ್ರಿಯ ಏಳನೇ ದಿನ ದೇವಿಯ ಆರಾಧಕರ ಮನಸ್ಸು ಸಹಸ್ರಾರ ಚಕ್ರದಲ್ಲಿ ಸ್ಥಿತವಾಗಿರುತ್ತದೆ.
ಮಹಾಗೌರಿ:
ನವರಾತ್ರಿಯ ಎಂಟನೇ ದಿನ ದೇವಿಯ ಮಹಾಗೌರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಮಹಾಗೌರಿ ಸ್ವರೂಪವನ್ನು ಪೂಜಿಸುವುದರಿಂದ ಸಮಸ್ತ ಪಾಪಗಳ ನಾಶವಾಗುತ್ತದೆ. ಮಹಾಗೌರಿ ಸ್ವರೂಪವನ್ನು ಅನ್ನಪೂರ್ಣೆ ಎಂದು ಸಹ ಕರೆಯಲಾಗುತ್ತದೆ. ನವರಾತ್ರಿಯ ಎಂಟನೇ ದಿನ ದೇವಿಯ ಆರಾಧಕರ ಮನಸ್ಸು ಸೋಮ ಚಕ್ರದಲ್ಲಿ ಸ್ಥಿತವಾಗಿರುತ್ತದೆ.
ಸಿದ್ಧಿಧಾತ್ರಿ:
ನವರಾತ್ರಿಯ ನವಮಿಯ ಅಂದರೆ ಒಂಭತ್ತನೇ ದಿನ ದೇವಿಯ ಸಿದ್ಧಿಧಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಸಮಸ್ತ ಕಾರ್ಯಗಳಿಗೆ ಸಿದ್ಧಿಯನ್ನು ಪ್ರಧಾನ ಮಾಡುವ ಸ್ವರೂಪವಾಗಿದೆ. ದೇವಿಯ ಈ ಸ್ವರೂಪವನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ.