ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಂಬುಲೆನ್ಸ್ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಟದ ಮಣೂರಿನಲ್ಲಿ ಇಂದು ಮುಂಜಾನೆ ನಡೆದಿದೆ. ಮೃತರನ್ನು ಉತ್ತರಕನ್ನಡ ಮೂಲದವರು ಎಂದು ಗುರುತಿಸಲಾಗಿದೆ.
ಉತ್ತರ ಕನ್ನಡ ಮೂಲದ ಉಲ್ಲಾಸ್ ತಳೇಕರ್ ಅವರಿಗೆ ಅನಾರೋಗ್ಯವಿದ್ದ ಕಾರಣ, ಉಲ್ಲಾಸ್ ಜೊತೆ ಕುಟುಂಬಸ್ಥರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಬರುತ್ತಿದ್ದರು. ಈ ವೇಳೆ ಕೋಟ ಮಣೂರು ಸಮೀಪ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಅನ್ನು ಹಾರಿ ಇನ್ನೊಂದು ಬದಿಗೆ ಎಸೆಯಲ್ಪಟ್ಟಿದೆ. ಆ ವೇಳೆ ಎದುರಿನಿಂದ ಬಂದ ಟ್ಯಾಂಕರ್ ಒಂದು ಆಂಬ್ಯುಲೆನ್ಸ್‌ಗೆ ಢಿಕ್ಕಿಯಾಗಿ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಸಾಧನಾ ಉಲ್ಲಾಸ್ ತಳೇಕರ್ ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಮೂರು ಮೃತದೇಹಗಳನ್ನು ರವಾನೆ ಮಾಡಲಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಕೋಟ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.











