ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮನುಷ್ಯ ಸಂಬಂಧಗಳು ಮೂಲೆ ಗುಂಪಾಗುತ್ತಿರುವ ಈ ಕಾಲಘಟ್ಟದಲ್ಲಿ ಧಾರ್ಮಿಕ – ಸಾಮಾಜಿಕ – ಸಾಂಸ್ಕೃತಿಕ ಸಮಾನತೆಯನ್ನು ಕಾಯ್ದುಕೊಳ್ಳಲು ಬಸವಾದಿ ಶಿವಶರಣರು ಪ್ರತಿಪಾದಿಸಿದ ಮಾನವೀಯ ಹೋರಾmದ ಅನಿವಾರ್ಯತೆ ಇದೆ ಎಂದು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಕೆ. ಕಿಶೋರ್ ಕುಮಾರ್ ಶೆಟ್ಟಿ ಹೇಳಿದರು.
ಇವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಸಹಮತ ವೇದಿಕೆಯ ಸಹಯೋಗದಲ್ಲಿ ನಡೆದ ‘ಮತ್ತೆ ಕಲ್ಯಾಣ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಬಹುತ್ವದ ಪರಿಕಲ್ಪನೆ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿರುವ ಜಾಗತೀಕರಣದ ಈ ಸಂದರ್ಭ, ಸಂಕುಚಿತಗೊಂಡ ಮನಸ್ಸುಗಳು ಇದಿರುಗೊಳ್ಳಬೇಕಾದದ್ದು ಅಂತರಂಗದ ಪ್ರತಿಭಟನೆಗೇ ವಿನಃ ಬಹಿರಂಗದ ಪ್ರತಿಭಟನೆಗಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಮಾತನಾಡಿ, ಡಾಂಬಿಕ ಬದುಕಿಗೆ ತೆರೆದುಕೊಂಡ ಪ್ರಸ್ತುತ ಸಮಾಜದಲ್ಲಿ ಮಠ-ಮಂದಿರ – ಮಸೀದಿಗಳ ನಿರ್ಮಾಣದ ಬದಲಾಗಿ ವೈಚಾರಿಕ ಮನಸ್ಸುಗಳು ನಿರ್ಮಾಣಗೊಳ್ಳಬೇಕಿದೆ. ಮಾನವೀಯತೆ – ವೈಚಾರಿಕತೆ – ಸಮಾನತೆಗಾಗಿ ಕಲ್ಯಾಣ ಕ್ರಾಂತಿಯ ಅಗತ್ಯತೆ ಇಂದಿಗಿದೆ ಎಂದರು.
‘ಮತ್ತೆ ಕಲ್ಯಾಣ’ದ ಕುಂದಾಪುರ ತಾಲೂಕು ಸಂಚಾಲಕ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕ ಪ್ರೊ ಹಯವದನ ಉಪಾಧ್ಯಾಯ ಮಾತನಾಡಿ, ಸಂಕುಚಿತತೆಗಳ ಚೌಕಟ್ಟನ್ನು ಹರಿದು ನಡವಳಿಕೆಯೇ ಧರ್ಮ ಎಂದಂತಹ ಹನ್ನರಡನೆಯ ಶತಮಾನದ ವಚನ ಚಳುವಳಿ ಮೊಟ್ಟ ಮೊದಲ ಪ್ರಜಾಸತ್ತಾತ್ಮಕ ಚಳುವಳಿ ಎಂದರು.
ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ರೇಷ್ಮಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ಸುಕುಮಾರ ಶೆಟ್ಟಿ ಕಮಲಶಿಲೆ ವಂದಿಸಿ, ಪ್ರವೀಣಾ ಮಹಾಬಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.















