ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಥಮ ವರ್ಷದ ವರ್ಧಂತಿ ಉತ್ಸವವು ಸೋಮವಾರದಂದು ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಬೆಳಿಗ್ಗೆ 9.00 ರಿಂದ ಜ್ಯೋತಿಷ್ಯ ವಿದ್ವಾನ್ ತಟ್ಟುವಟ್ಟು ವಾಸುದೇವ ಜೋಯಿಸರ ನೇತೃತ್ವದಲ್ಲಿ 24 ಪರಿಕಲಸ ಸಹಿತ ಪ್ರಧಾನ ಬ್ರಹ್ಮ ಕುಂಭಾಭಿಷೇಕ, ಕಲಾತತ್ವಪೂರ್ವಕ ಪ್ರಧಾನ ಅಧಿವಾಸ ಹೋಮ, ಶ್ರೀ ನಾಗದೇವರಿಗೆ ನವಕ ಪ್ರಧಾನ ಹೋಮ ನಡೆಯಿತು.
ಮಧ್ಯಾಹ್ನ 12.00 ರಿಂದ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, 12.30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6.00 ರಿಂದ ರಂಗಪೂಜೆ ಮತ್ತು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಹಾಲಾಡಿ ಮತ್ತು ಶ್ರೀ ಮಹಾ ವಿಷ್ಣುಮೂರ್ತಿ ಭಜನಾ ಮಂಡಳಿ ಗೋರಾಜೆ ಇವರಿಂದ ಭಜನಾ ಕಾರ್ಯಕ್ರಮ ಹಾಗೂ ಶ್ರೀ ಸ್ವಾಮಿ ಚಂಡೆ ಬಳಗ ಹಾಲಾಡಿ ಇವರಿಂದ ಚಂಡೆ ವಾದನ ನಡೆಯಿತು. ನಂತರ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಭಾಸ್ಕರ ಅಡಿಗ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ರತ್ನಗಿರಿ ಶ್ರೀ ಲಕ್ಷ್ಮೀ ನರಸಿಂಹ ಗೆಳೆಯರ ಬಳಗದ ಸದಸ್ಯರು ಹಾಗೂ ಗ್ರಾಮಸ್ಥರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಹಾಗೂ ವರ್ಧಂತಿ ಉತ್ಸವಕ್ಕೆ ದೇಣಿಗೆ ನೀಡಿದ ಹಾಗೂ ದೇವಸ್ಥಾನದ ಚಾಕರಿ ಹಾಗೂ ಕಾರ್ಯಕ್ರಮದಲ್ಲಿ ಸಹಕರಿಸಿದವರನ್ನು ಗುರುತಿಸಿ ಗೌರವಿಸಲಾಯಿತು.
















