ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ಜನರಲ್ಲಿ ಸಾಮರಸ್ಯ ಹೆಚ್ಚಿಸುವ ನಿಟ್ಟಿನಲ್ಲಿ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಆಯೋಜಿಸಲಾಗಿರುವ ಕ್ರಿಕೆಟ್ ಪಂದ್ಯಾಟ ಒಂದು ಉತ್ತಮ ಸಂದೇಶವನ್ನು ರಾಜ್ಯಕ್ಕೆ ನೀಡುತ್ತಿದೆ. ಅತಿ ಸೂಕ್ಷ್ಮ ಪ್ರದೇಶವೆಂಬ ಹಣೆ ಪಟ್ಟಿಯನ್ನು ತೆಗೆದು ಹಾಕಿ ಜನರು ಅನ್ಯೋನ್ಯವಾಗಿ, ಪ್ರೀತಿಯಿಂದ ಸಂತೋಷವಾಗಿ ಜೀವನ ನಡೆಸುವಂತಾಗಬೇಕು. ಪೊಲೀಸ್ ಇಲಾಖೆ ಇಂತಹ ಒಂದು ಉತ್ತಮ ಉದ್ದೇಶವನ್ನಿಟ್ಟುಕೊಂಡು ಗಂಗೊಳ್ಳಿಯ ಎಲ್ಲರನ್ನು ಒಂದುಗೂಡಿಸಿ ಆಯೋಜಿಸಿರುವ ಕ್ರೀಡಾಕೂಟ ಜನರ ಮನಸ್ಸಿನಲ್ಲಿರುವ ಭಯವನ್ನು ತೊಡೆದು ಹಾಕಿ ಗಂಗೊಳ್ಳಿಯಲ್ಲಿ ಉತ್ತಮ ವಾತಾವರಣ ನಿರ್ಮಿಸುವಲ್ಲಿ ಸಹಕಾರಿಯಾಗಲಿದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಗಂಗೊಳ್ಳಿ ಸೌಹಾರ್ದ ಕ್ರೀಡಾ ಸಮಿತಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಟೆನ್ನಿಸ್ ಬಾಲ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಗಂಗೊಳ್ಳಿ ಪ್ರೀಮಿಯರ್ ಲೀಗ್ ’ಪಂಚಗಂಗಾವಳಿ ಸೌಹಾರ್ದ ಟ್ರೋಫಿ – ೨೦೨೦’ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಚ್.ಗಣೇಶ ಕಾಮತ್, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಕೆ.ನಾಗ ಖಾರ್ವಿ, ಕುಂದಾಪುರ ಡಿವೈಎಸ್‌ಪಿ ಹರಿರಾಮ್ ಶಂಕರ್ ಶುಭಾಶಂಸನೆಗೈದರು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಉದ್ಯಮಿ ದಯಾನಂದ ಪೂಜಾರಿ, ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನದ ಅರ್ಚಕ ಜಿ.ಲಕ್ಷ್ಮೀನಾರಾಯಣ ಭಟ್, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಪ್ರಮೋದ ಗಾಣಿಗ, ಸಮಿತಿ ಅಧ್ಯಕ್ಷ ಜಿ.ದಿನೇಶ ಪೈ ಮತ್ತಿತರರು ಉಪಸ್ಥಿತರಿದ್ದರು. ಗಂಗೊಳ್ಳಿಯ ಸ.ವಿ.ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಸಮಿತಿಯ ಕಾರ್ಯದರ್ಶಿ ಕೃಷ್ಣ ಪೂಜಾರಿ ಸ್ವಾಗತಿಸಿದರು. ಖಜಾಂಚಿ ಬಿ.ರಾಘವೇಂದ್ರ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಸಂತ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

















