ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಕ್ರಮವಾಗಿ ಕಂಟೇನರ್ ಲಾರಿಯಲ್ಲಿ 59 ಕೋಣಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವ ಮಾಹಿತಿ ಆಧಾರದಲ್ಲಿ ಸೈಬರಕಟ್ಟೆ ಚೆಕ್ ಪೋಸ್ಟ್ ಬಳಿ ಶುಕ್ರವಾರ ಮುಂಜಾನೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

ಹರಿಯಾಣದಿಂದ ಕೇರಳಕ್ಕೆ ಜಾನುವಾರ ಸಾಗಾಟ ಮಾಡುತ್ತಿದ್ದ ಬಗ್ಗೆ ತನಿಖೆ ವೇಳೆ ತಿಳಿದುಬಂದಿದೆ.ಕೇರಳ ಮೂಲದ ಅಬ್ದುಲ್ ಜಬ್ಭ್ರ್ (35), ಜೋಮುನ್ (36), ಶಂಶುದ್ದೀನ್ (34), ಹರಿಯಾಣ ಮೂಲದ ಮುಖೀಮ್ (18) ಎಂಬುವವರನ್ನು ಬಂಧಿಸಲಾಗಿದೆ. ಎಮ್ಮೆ ಕರುಗಳ ಮಾಲಿಕ ಕೇರಳದ ಅಬ್ದುಲ್ ಅಜೀಜ್ ಹಾಗೂ ಕಂಟೈನರ್ ಮಾಲಿಕ ಮೈಸೂರು ಮೂಲದ ರಫಿಕ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಕೋಟ ಠಾಣೆಯ ಪಿಎಸ್ಐ ಸಂತೋಷ್ ಬಿ.ಪಿ. ಅವರು ಸಿಬಂದಿಗಳ ಜೊತೆಗೆ ಕಾರ್ಯಾಚರಣೆ ನಡೆಸಿ ಕಂಟೈನರ್ ಲಾರಿ ಹಾಗೂ 2 ಲಕ್ಷ ಮೌಲ್ಯದ ಎಮ್ಮೆ ಕರುಗಳನ್ನು ಹಾಗೂ ಕಟ್ಟಲು ಉಪಯೋಗಿಸಿದ ನೈಲಾನ್ ಹಗ್ಗವನ್ನು ವಶಕ್ಕೆ ಪಡೆದಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















