ಕುಂದಾಪುರ: ತಾಲೂಕಿನ ನಾಡ ಗ್ರಾ.ಪಂ. ಎದುರು ವಿವಿಧ ಮೂಲ ಸೌಕರ್ಯಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಎಂ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿ ದಿನೇ ದಿನೇ ಜನರ ಸಂಕಷ್ಟಗಳನ್ನು ತೀವ್ರಗೊಳಿಸುತ್ತಿರುವ ಕೇಂದ್ರ ಸರಕಾರ ಜನರ ನಿರೀಕ್ಷೆಗಳನ್ನು ಹುಸಿಗೊಳಿಸುತ್ತಿರುವ ರಾಜ್ಯ ಸರಕಾರಗಳ ವಿರುದ್ಧ ಹರಿಹಾಯ್ದರು.
ಸಿಪಿಎಂ ಮುಖಂಡ ವೆಂಕಟೇಶ ಕೋಣಿ ಮಾತನಾಡಿ, ಸರಕಾರಿ ಜಮೀನಿನಲ್ಲಿ ವಾಸವಾಗಿದ್ದು, 94 ಸಿ ಕಲಂ ಅನ್ವಯ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಬಡರೈತರಿಗೆ ಈ ಕೂಡಲೇ ಭೂಮಿ ಮಂಜೂರು ಮಾಡಬೇಕು. ಅಲ್ಲದೇ ಶುಲ್ಕ ವಿಧಿಧಿಸದೆ ಉಚಿತವಾಗಿ ಹಕ್ಕು ಪತ್ರ ನೀಡಬೇಕು. ಮನೆ ನಿವೇಶನ ರಹಿತರಿಗೆ ನಿವೇಶನ ಹಕ್ಕು ಪತ್ರ ಮಂಜೂರು ಮಾಡಲು ಸರಕಾರಿ ಸ್ಥಳ ಗುರುತಿಸುವುದಕ್ಕೆ ಗ್ರಾ.ಪಂ.ತತ್‌ಕ್ಷಣ ಕ್ರಮವಹಿಸಬೇಕು. ಉದ್ಯೋಗ ಖಾತ್ರಿ ಕೂಲಿಕಾರರಿಗೆ ಬಾಕಿ ಇರುವ ವೇತನ ಕೂಡಲೇ ಬಿಡುಗಡೆ ಮಾಡಬೇಕೆಂದು ಹೇಳಿದರು.
ಪಂಚಾಯತ್ ಅಧ್ಯಕ್ಷ ಜಯನ್‌ಮೇರಿ ಒಲಿಯವೇರ ಅವರಿಗೆ ಮನವಿ ಸಲ್ಲಿಸಲಾಯಿತು. ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ರಾಜೀವ ಪಡುಕೋಣೆ ಸುಬ್ರಹ್ಮಣ್ಯ ಆಚಾರ್, ನಾಗರತ್ನಾ ನಾಡ, ರಾಜೇಶ್, ಮನೋರಮಾ ಭಂಡಾರಿ, ಶೀಲಾವತಿ, ಪರಮೇಶ್ವರ ಗಾಣಿಗ, ಉಪಸ್ಥಿತರಿದ್ದರು.









