ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಈ ವರ್ಷವೂ ಸಹ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಸಾಧನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ – 2025 ಅವಾರ್ಡನ್ನು ಪಡೆದುಕೊಂಡಿದೆ.
ಅತ್ಯುತ್ತಮ ಸಹಪಠ್ಯ ಚಟುವಟಿಕೆಗಳು, ಅತ್ಯುತ್ತಮ ಬೋರ್ಡಿಂಗ್ ಶಾಲೆ, ಶಿಕ್ಷಣದಲ್ಲಿ ಜೀವನ ಕೌಶಲ್ಯಗಳ ಸಹಭಾಗಿತ್ವ ಈ ಮೂರು ಪ್ರತಿಷ್ಠಿತ ಶ್ರೇಣಿಗಳಲ್ಲಿ ಶಾಲೆಯ ಶಿಸ್ತುಬದ್ಧತೆ, ಕಾರ್ಯಗಳ ಅನುಷ್ಠಾನ, ಸುರಕ್ಷತಾ ವ್ಯವಸ್ಥೆ, ಹಸಿರು ವಾತಾವರಣ, ಶಾಲೆಯ ಕಟ್ಟಡ ಮೊದಲಾದ ವಿಭಾಗಗಳಲ್ಲಿ ಇರುವ ಸುವ್ಯವಸ್ಥಿತಿಗಳನ್ನು ಪರಿಶೀಲಿಸಿ ಈ ಗೌರವ ನೀಡಲ್ಪಟ್ಟಿದೆ.
ಹೈದರಾಬಾದ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಶಾಲೆಯ ಸಹ ಸಂಯೋಜಕಿಯಾದ ಶ್ರುತಿ ಪೂಜಾರಿ, ಪ್ರಶಸ್ತಿಯನ್ನು ಸ್ವೀಕರಿಸಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಅವರು ಈ ಕುರಿತು ಸಂತೋಷ ವ್ಯಕ್ತಪಡಿಸಿ ಮಾತನಾಡಿ, ಸಮಾಜವು ನಮ್ಮನ್ನು ಗುರುತಿಸುತ್ತಿರುವುದು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚು ಮಾಡುತ್ತಿದೆ. ಶಾಲೆಯ ವ್ಯವಸ್ಥೆಯನ್ನು ಇನ್ನಷ್ಟು ಆಧುನೀಕರಣಗೊಳಿಸಿಕೊಳ್ಳಲು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಸದಾ ಕ್ರಿಯಾಶೀಲವಾಗಿ ಪ್ರಯತ್ನಿಸುತ್ತಿದೆ. ಶಾಲೆಯ ಎಲ್ಲಾ ಸಿಬ್ಬಂದಿಗಳು ಒಂದೇ ಕುಟುಂಬದವರಂತೆ ಕಾರ್ಯ ನಿರ್ವಹಿಸುತ್ತಿರುವುದು ಇದೆಲ್ಲದಕ್ಕೂ ಸಹಕಾರಿಯಾಗಿದೆ. ಇವೆಲ್ಲಕ್ಕೂ ಶ್ರೀ ಸಿದ್ಧಿ ವಿನಾಯಕನ ಅನುಗ್ರಹವೇ ಮೂಲ ಕಾರಣ ಎಂದರು.















