ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ಗುರುತಿಸುವಲ್ಲಿ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅವರ ಕೊಡುಗೆ ದೊಡ್ಡದಿದೆ, ಬೈಂದೂರಿನ ಅಭಿವೃದ್ಧಿಗೆ ಮೇಲ್ಪಂಕ್ತಿ ಹಾಕಿ ಅವರನ್ನು ಸಮಾಜ ಸದಾ ಸ್ಮರಿಸಲಿದೆ. ಉಸಿರು ನಿಂತರೂ ಹೆಸರು ಬೈಂದೂರಿನ ಇತಿಹಾಸದಲ್ಲಿ ಚಿರಸ್ಥಾಯಿಯಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯ ಹೇಳಿದರು.




ಅವರು ಇಲ್ಲಿನ ಜೆ.ಎನ್.ಆರ್ ಕಲಾಮಂದಿರದಲ್ಲಿ ಭಾನುವಾರ ನಡೆದ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅವರ ಶೃದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿ, ಲಕ್ಷ್ಮೀನಾರಾಯಣ ಅರು ಚುನಾವಣೆಯಲ್ಲಿ ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಸ್ಥಿತಪ್ರಜ್ಞಾರಾಗಿ ಇಲ್ಲಿನ ಅಭಿವೃದ್ಧಿಗಾಗಿ ಚಿಂತನೆ ನಡೆಸುತ್ತಿದ್ದರು. ನೇರ, ನಿಷ್ಠುರವಾದಿಯಾಗಿದ್ದ ಅವರು ಯಡಿಯೂರಪ್ಪನವರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ನನ್ನ ಮೊದಲ ಚುನಾವಣೆಯ ಸಂದರ್ಭದಲ್ಲಿ ಜೊತೆಗೆ ನಿಂತು ಕ್ಷೇತ್ರಾದ್ಯಂತ ತಿರುಗಾಡಿದ ಸಂದರ್ಭ ಮರೆಯಲಾಗದು ಎಂದರು.


ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ನನ್ನ ಮತ್ತು ಲಕ್ಷ್ಮೀನಾರಾಯಣ ಅವರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ, ವೈಯುಕ್ತಿಕವಾಗಿ ನಮ್ಮೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ಉದ್ಯಮಿಯಾಗಿ, ಜನಪ್ರತಿನಿಧಿಯಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಸ್ಪಂದಿಸುವ ಕಾರ್ಯ ಮಾಡಿದ್ದರು. ಅವರ ನಿಧನದ ವಿಚಾರ ಬೇಸರ ತರಿಸಿದೆ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ, ಮುಖಂಡರಾದ ಸದಾನಂದ ಉಪ್ಪಿನಕುದ್ರು, ಬಿ.ಎಸ್. ಸುರೇಶ ಶೆಟ್ಟಿ, ರಾಜೇಶ ಕಾವೇರಿ, ಪ್ರಿಯದರ್ಶಿನಿ ದೇವಾಡಿಗ, ಶ್ಯಾಮಲಾ ಕುಂದರ್, ಕೆ.ಬಿ. ಶೆಟ್ಟಿ, ಡಾ. ಅತುಲ್‌ಕುಮಾರ ಶೆಟ್ಟಿ, ನವೀನಚಂದ್ರ ಉಪ್ಪುಂದ, ಸುರೇಶ ಬಟವಾಡಿ, ಮಹೇಂದ್ರ ಪೂಜಾರಿ, ಉಮೇಶ ಶೆಟ್ಟಿ ಕಲ್ಗದ್ದೆ, ಶಿವರಾಜ ಪೂಜಾರಿ ಗೋಳಿಹೊಳೆ, ರವಿ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.














