ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬೀಚ್ ಬಳಿ ಮನೆಯೊಂದರಲ್ಲಿ ಇರಿಸಿದ್ದ ಬ್ಯಾಗ್‌ನಿಂದ ಆಭರಣಗಳನ್ನು ಕದ್ದಿದ್ದ ಇಬ್ಬರು ಆರೋಪಿಗಳನ್ನು ಕ್ಷಿಪ್ರವಾಗಿ ಬಂಧಿಸಲು ಗಂಗೊಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಜ್ಜಾಡಿ ನಿವಾಸಿ ವಿನಾಯಕ ಖಾರ್ವಿ (41), ಪ್ರಮೀಳಾ (30) ಬಂಧಿತರು.
ಜ.21 ರಂದು ಉದಯ ಪೂಜಾರಿ ಎಂಬುವವರ ಮನೆಯ ಟೇಬಲ್ ಮೇಲೆ ಇಡಲಾಗಿದ್ದ ಬ್ಯಾಗಿನ ಜೀಪ್ ತೆಗೆದು ಬ್ಯಾಗ್ ನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ನೆಕ್ಲೇಸ್, 16 ಗ್ರಾಂ ತೂಕದ ಬಳೆ ಹಾಗೂ 3 ಗ್ರಾಂ ತೂಕದ 3 ಚಿನ್ನದ ಉಂಗುರ ಸಹಿತ 2 ಲಕ್ಷದ ಆಭರಣ ಕಳವಾಗಿದ್ದು ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಮನೆ ಕಳ್ಳತನದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಜ. 21 ರಂದು ರಾತ್ರಿ 8 ಗಂಟೆ ಸುಮಾರಿಗೆ ಆರೋಪಿಗಳಾದ ಗುಜ್ಜಾಡಿ ನಿವಾಸಿ ವಿನಾಯಕ(41), ಪ್ರಮೀಳಾ(30) ಎನ್ನುವರನ್ನು ವಶಕ್ಕೆ ಪಡೆದು ಆರೋಪಿಗಳು ಕಳವುಗೈದ 2 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟಿಯನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಗಂಗೊಳ್ಳಿ ಠಾಣಾ ಪಿಎಸ್ಐ ಹರೀಶ್ ಆರ್. ಹಾಗೂ ಸಿಬ್ಬಂದಿಗಳಾದ ಶಾಂತರಾಮ, ರಾಜು, ನಾಗರಾಜ, ರಾಘವೇಂದ್ರ, ಸಂದೀಪ ಕುರಣಿ, ಮಾರುತಿ ನಾಯ್ಕ, ದಿನೇಶ್ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.










