ಗಂಗೊಳ್ಳಿ: ಸಾರ್ವಜನಿಕರಿಗೆ ಹಾಗೂ ಯುವ ಜನರಿಗೆ ರಕ್ತದಾನದ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಗಂಗೊಳ್ಳಿಯ ಯಕ್ಷಾಭಿಮಾನಿ ರಕ್ತದಾನಿಗಳ ಬಳಗದ ಸದಸ್ಯರು ಸತತ 16ನೇ ವರ್ಷ ಗಂಗೊಳ್ಳಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಿದರು.
ಯಕ್ಷಾಭಿಮಾನಿ ರಕ್ತದಾನಿಗಳ ಬಳಗದ ಸುಮಾರು 36 ಮಂದಿ ರಕ್ತದಾನಿಗಳು ಗುರುಚರಣ್ ಖಾರ್ವಿ ನೇತೃತ್ವದಲ್ಲಿ ಸತತ 16ನೇ ವರ್ಷ ಗಂಗೊಳ್ಳಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿ ರಕ್ತದಾನಿಗಳು, ರಕ್ತದಾನಿಗಳ ಹಾಗೂ ಗ್ರಾಮದ ಅಭಿವೃದ್ಧಿಗೆ ಪ್ರಾರ್ಥಿಸಿದರು.
ದಾರಿಯುದ್ದಕ್ಕೂ ರಕ್ತದಾನದ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿ ಜನರ ಪ್ರಶಂಸೆಗೆ ಪಾತ್ರರಾದರು. ಪಾದಯಾತ್ರೆಗೂ ಮುನ್ನ ಗಂಗೊಳ್ಳಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿ ಸುಮಾರು 69 ಯೂನಿಟ್ ರಕ್ತವನ್ನು ರಕ್ತನಿಧಿ ಕೇಂದ್ರಕ್ಕೆ ನೀಡಿದರು.
ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ಕಂಡು ಬರುತ್ತಿದೆ. ತುರ್ತು ಸಂದರ್ಭದಲ್ಲಿ ರಕ್ತದಾನಿ ಬಳಗದ ಸದಸ್ಯರು ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ರಕ್ತದಾನದ ಬಗ್ಗೆ ಜನರಲ್ಲಿರುವ ತಪ್ಪು ತಿಳುವಳಿಕೆ ಹೋಗಲಾಡಿಸಿ, ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಪಾದಯಾತ್ರೆ ನಡೆಸಲಾಗುತ್ತಿದೆ. ಇದರಿಂದ ಉತ್ತಮ ಪ್ರತಿಕ್ರಿಯೆ, ಯಶಸ್ಸು ದೊರೆತಿದೆ ಎಂದು ಗಂಗೊಳ್ಳಿಯ ಯಕ್ಷಾಭಿಮಾನಿ ರಕ್ತದಾನಿಗಳ ಬಳಗದ ಗುರುಚರಣ್ ಖಾರ್ವಿ ಅಭಿಪ್ರಾಯಪಟ್ಟಿದ್ದಾರೆ.
















