ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗೃಹಲಕ್ಷ್ಮೀ ಫಲಾನುಭವಿಗಳ ಸ್ವಸಹಾಯ ಗುಂಪು ರಚಿಸಿ, ಅದರ ಉಳಿತಾಯದ ಹಣದಲ್ಲಿ ಮಹಿಳೆಯರ ಸ್ವ-ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಕೊಡುವ ಬಗ್ಗೆ ಚಿಂತನೆಯಿದೆ. ಅದು ಆ.15ರಂದು ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ ಹೇಳಿದರು.
ಅವರು ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೃಹಲಕ್ಷ್ಮೀ ಫಲಾನುಭವಿಗಳ ಸ್ವ-ಸಹಾಯ ಗುಂಪುಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ವಿಲೀನಗೊಳಿಸಿ, ಮಹಿಳಾ ಸ್ವಉದ್ಯೋಗಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಬೈಂದೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ನೀರು ಸರಬರಾಜು ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು, ಸದ್ಯದಲ್ಲಿ ಅದು ಪೂರ್ಣಗೊಳ್ಳಲಿದೆ ಎಂದ ಅವರು ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳ ಸಂಚಾರಕ್ಕೆ ತೊಡಕ್ಕಾಗದಂತೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸು ವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ಯಾರಂಟಿಯಿಂದ 206.57 ಕೋಟಿ:
ಸರಕಾರದ ಪಂಚ ಗ್ಯಾರಂಟಿ ಯೋಜನೆ ಯಿಂದ ಬೈಂದೂರು ತಾಲೂಕಿಗೆ ಇದುವರೆಗೆ ಸುಮಾರು 206.57 ಕೋಟಿ ರೂ. ವೆಚ್ಚಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ 107.68 ಕೋಟಿ ಜಮಾ ಆಗಿದೆ. ಗೃಹ ಜ್ಯೋತಿ ಯೋಜನೆಯಿಂದ ಬೈಂದೂರು ಮೆಸ್ಕಾಂ ಉಪ ಕೇಂದ್ರ ವ್ಯಾಪ್ತಿಯ 28083 ಕುಟುಂಬಗಳಿಗೆ 39.92 ಕೋಟಿ ರೂ., ತಲ್ಲೂರು ಮೆಸ್ಕಾಂ ಉಪ ಕೇಂದ್ರ ವ್ಯಾಪ್ತಿಯ 1856 ಕುಟುಂಬಗಳಿಗೆ 2.55 ಕೋಟಿ ರೂ. ಸೇರಿದಂತೆ ಸುಮಾರು 42.48 ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆ ಯಡಿ 25,532 ಪಡಿತರ ಚೀಟಿಗಳಿಗೆ
191,50,330 ರೂ. ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಯುವ ನಿಧಿ ಯೋಜನೆ ಯಡಿ 389 ಫಲಾನುಭವಿಗಳಿಗೆ 90.36 ಲಕ್ಷ ರೂ. ಜಮಾ ಆಗಿದೆ. ಶಕ್ತಿ ಯೋಜನೆಯಡಿ ಇದುವರೆಗೆ 1.48 ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು 53.58 ಕೋಟಿ ರೂ. ರಿಯಾಯಿತಿ ಪಡೆದಿದ್ದಾರೆ ಎಂದರು.
ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಸುರೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಮಾಲತಿ ಶಿವಾನಂದ, ರಾಮ ಪೂಜಾರಿ, ಸೂರ್ಯಕಾಂತಿ ಡಿ., ಅಣ್ಣಪ್ಪ ಶೆಟ್ಟಿ ದೇವದಾಸ್ ವಿ.ಜೆ., ಬಾಬು ದೇವಾಡಿಗ, ರಾಮಚಂದ್ರ ಖಾರ್ವಿ, ಮುಕ್ರಿ ಮೊಹಮ್ಮದ್ ಅಲ್ತಾಫ್, ಮೆಸ್ಕಾಂ, ಕೆಎಸ್‌ಆರ್‌ಟಿಸಿ, ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ ಹಾಗೂ ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.















