ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಲೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಯಕ್ಷಗಾನವು ಆಧಾರವಾಗಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಶನಿವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯುವ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ 50ನೇ ವರ್ಷದ ಕಾರ್ಯಕ್ರಮ “ಸುವರ್ಣಾಕ್ಷ” ನನ್ನು ಉದ್ಘಾಟಿಸಿ ಮಾತನಾಡಿದರು . ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಉಳಿಸುವಲ್ಲಿ ಕರ್ನಾಟಕದ ಸಾಂಸ್ಕೃತಿಕ ಕಲೆ ಯಕ್ಷಗಾನವು ಬಹುದೊಡ್ಡ ಪಾತ್ರ ವಹಿಸಿದೆ. ಕಳೆದ 3 ವರ್ಷಗಳಿಂದ ಕುಂದಾಪುರದ 22 ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡಿ ವಿದ್ಯಾರ್ಥಿಗಳಿಂದ ಪ್ರದರ್ಶನ ಏರ್ಪಡಿಸಲಾಗುತ್ತದೆ. ಇದರಿಂದ ಭಾಷಾ ಶುದ್ಧಿ ಮತ್ತು ನಿರರ್ಗಳತೆ, ಅಧ್ಯಯನಕ್ಕೂ ಸಹ ಸಹಕಾರಿಯಾಗುತ್ತದೆ. ಅಲ್ಲದೆ ಕಲಿಕೆಗೆ ಒಳ್ಳೆಯ ವ್ಯವಸ್ಥೆಯಾಗುತ್ತದೆ.

ಈ ಕಲೆಯ ಪ್ರಾಮುಖ್ಯತೆ ಅರಿತು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಹೆಚ್. ಶಾಂತಾರಾಮ್ ಅವರು ಆಶಯದಂತೆ ಆರಂಭವಾದ ಈ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ ಇಂದು ಸುವರ್ಣ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ಮಾತನಾಡಿ, ನಮ್ಮ ಸರಕಾರವು ಕಲಿಕೆಯ ಭಾಗವಾಗಿ ಸಂಗೀತ ಮತ್ತು ಕಲೆ ಇವುಗಳನ್ನು ಪಠ್ಯದಲ್ಲಿ ಸೇರಿಸಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ ಕಾರ್ಯಕ್ರಮ ಸಂಚಾಲಕ ಶಶಾಂಕ್ ಪಟೇಲ್ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಮ್ ಗೊಂಡ ಶುಭಾಶಂಸನೆಗೈದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪನ್ಯಾಸಕಿ ಶೃತಿ ಕಾಶಿ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಅಕ್ಷತಾ ವಂದಿಸಿದರು.















