ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಮಂಗಳವಾರದಂದು ವಾರ್ಷಿಕ ಕ್ರೀಡಾಕೂಟವು ಸಂಪನ್ನಗೊಂಡಿತು.
14 ಮತ್ತು 17 ರ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಉದ್ದಜಿಗಿತ, ಗುಂಡೆಸೆತ, 100ಮೀ, 200ಮೀ, 400ಮೀ, 800ಮೀ, 1500ಮೀ ಓಟ ಮತ್ತು ರಿಲೇ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.
ಈ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳ ನೆಲೆಯಲ್ಲಿ ಉಪಸ್ಥಿತರಿದ್ದ ಗೌತಮ ಶೆಟ್ಟಿ ಅವರು ಉದ್ಘಾಟನೆ ನಡೆಸಿ ಮಾತನಾಡಿ, ಆಟಗಳಲ್ಲಿ ಸೋಲು ಗೆಲುವು ಮುಖ್ಯವಾದುದಲ್ಲ. ಅದರಲ್ಲಿ ತೊಡಗಿಸಿಕೊಳ್ಳುವುದು ಅತಿಮುಖ್ಯ. ಆಟಗಳನ್ನು ಆಡುವಾಗ ನಮ್ಮ ನಮ್ಮ ಆಟಗಳಲ್ಲಿ ಆನಂದವನ್ನು ಹೊಂದಬೇಕು. ಪ್ರತಿಯೊಂದು ಸ್ಪರ್ಧೆಯಲ್ಲೂ ನಮ್ಮ ಕ್ರೀಡಾ ಜೀವನಕ್ಕೆ ಏನು ಪಡೆದಿದ್ದೇವೆ ಎನ್ನುವುದು ಮುಖ್ಯ. ಆಟಗಳಿಂದ ಉತ್ತಮ ಆರೋಗ್ಯವಂತೂ ನಮಗೆ ಸಿದ್ಧಿಸುತ್ತದೆ. ನಮ್ಮ ಮನಸ್ಸನ್ನು ಸದಾ ನಿರ್ಮಲವಾಗಿಟ್ಟುಕೊಂಡು ಆಡಬೇಕು. ಎಂದು ತಮ್ಮ ಜೀವನದ ಅನುಭವಗಳ ಮೂಲಕ ತಿಳಿ ಹೇಳಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಹಾಗೂ ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಮಾಣಪತ್ರಗಳನ್ನು ಹಸ್ತಾಂತರಿಸಿ ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಲಾಪ್ರಾಂಶುಪಾಲರು ಕ್ರೀಡೆಗಳಲ್ಲಿ ಶಿಸ್ತು ಅತ್ಯಗತ್ಯ. ಆಹಾರ ಸೇವನೆಯೂ ಹಿತ ಮಿತವಾಗಿರಬೇಕು. ಕ್ರೀಡೆಗಳಲ್ಲಿ ಸದಾ ಲವಲವಿಕೆಯಿಂದ ಪಾಲ್ಗೊಳ್ಳಬೇಕು.
ಪುನಃ ಪುನಃ ಅಭ್ಯಾಸದಿಂದ ಎಲ್ಲಾ ಆಟಗಳೂ ಸಿದ್ಧಿಸುತ್ತವೆ. ಸಿಕ್ಕೆಲ್ಲ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಆಗ ಸಾಧಿಸಿ ಕೀರ್ತಿ ಪಡೆಯುತ್ತೇವೆ. ಅರ್ಧದಲ್ಲೇ ಹೋರಾಟವನ್ನು ಮೊಟಕುಗೊಳಿಸಿದರೆ ಆರಂಭದಿಂದ ಪಟ್ಟ ಪ್ರಯತ್ನ ವ್ಯರ್ಥಗೊಳ್ಳುತ್ತದೆ. ಹಾಗಾಗಿ ನಮ್ಮ ಪ್ರಯತ್ನ ನಿರಂತರವಾಗಿರಬೇಕು ಎಂದು ಕರೆಕೊಟ್ಟರು.
ವಿದ್ಯಾರ್ಥಿಗಳಾದ ಶುಶ್ಮಿತಾ ಮಹೇಶ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸ್ವಯಂ ಪಿ ಶೆಟ್ಟಿ ಸ್ವಾಗತಿಸಿ, ಕುಮಾರ ವಿಶ್ರುತ್ ವಂದಿಸಿದರು.
















