ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಉಪ್ಪುಂದದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ರಥಬೀದಿ ವಠಾರದಲ್ಲಿ ರಾತ್ರಿ ನಡೆದ ‘ಉಪ್ಪುಂದ ಶ್ರೀ ಕ್ಷೇತ್ರ ಮಹಾತ್ಮೆʼ ಪ್ರಸಂಗ ಬಿಡುಗಡೆ ಸಮಾರಂಭವು ವೈಭವದಿಂದ ಇತ್ತೀಚಿಗೆ ನೆರವೇರಿತು.

ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಗುರುರಾಜ್ ಗಂಟೆಹೊಳೆ ಅವರು ಉದ್ಘಾಟಿಸಿದರು. ಆಡಳಿತ ಮೊಕ್ತೇಶರಾದ ಸೀತಾರಾಮ್ ಶೆಟ್ಟಿ ಮತ್ತು ನಿವೃತ್ತ ಮುಖ್ಯೋಪಾಧ್ಯಾಯರಾದ ವಿಶ್ವೇಶ್ವರ ಅಡಿಗ ಅವರು ಕ್ಷೇತ್ರದ ನಂಬಿಕೆ–ಪರಂಪರೆಯ ಸಾರವನ್ನು ಒಳಗೊಂಡಿರುವ “ಉಪ್ಪುಂದ ಕ್ಷೇತ್ರ ಮಹಾತ್ಮೆ” ಪ್ರಸಂಗವನ್ನು ಲೋಕಾರ್ಪಣೆಗೊಳಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಯು. ಸತೀಶ್ ಶೆಟ್ಟಿ ಅವರು ಅಧ್ಯಕ್ಷೀಯ ಭಾಷಣದಲ್ಲಿ ಪ್ರಸಂಗದ ಮಹತ್ವ, ಕ್ಷೇತ್ರದ ಐತಿಹಾಸಿಕತೆ ಮತ್ತು ಭಕ್ತರ ಒಗ್ಗಟ್ಟಿನ ಪ್ರಾಮುಖ್ಯತೆಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನಚಂದ್ರ, ಪ್ರಧಾನ ಅರ್ಚಕರಾದ ಪ್ರಕಾಶ್ ಉಡುಪ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮದನ ಕುಮಾರ್, ಓಕುಳಿ ಸಮಿತಿ ಮಂಜುನಾಥ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ರಮೇಶ್ ಆರ್.ಜೆ., ಉಪಾಧಿವಂತರು ಶಂಕರ ಪುರಾಣಿಕ, ಕೋಟೇಶ್ವರ ಪ್ರಸಂಗಕರ್ತರಾ ಬಸವರಾಜ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ನಿಹಾರಿಕಾ ಆರ್. ದೇವಾಡಿಗ ಪ್ರಾರ್ಥನೆಗೈದರು. ಸಂದೇಶ ಭಟ್ ಅತಿಥಿಗಳನ್ನು ಸ್ವಾಗತಿಸಿ, ಶಿಕ್ಷಕರಾದ ಸುಧಾಕರ್ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿ, ಪುರುಷೋತ್ತಮದಾಸ್ ಉಪ್ಪುಂದ ಧನ್ಯವಾದಗಳನ್ನು ಸಲ್ಲಿಸಿದರು.
ರಾತ್ರಿ 9:30ಕ್ಕೆ ಶ್ರೀ ಕ್ಷೇತ್ರ ಕಳವಾಡಿ ಮೇಳದ ಕಲಾವಿದರಿಂದ “ಉಪ್ಪುಂದ ಕ್ಷೇತ್ರ ಮಹಾತ್ಮೆ” ಯಕ್ಷಗಾನ ಬಯಲಾಟ ನಡೆಯಿತು.















