ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶಿಕ್ಷಕ ವರ್ಗಕ್ಕೆ ಪ್ರಾಥಮಿಕ ಚಿಕಿತ್ಸೆಯ ಅರಿವು ಮೂಡಿಸುವ ಕಾರ್ಯಗಾರವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರದ ಸಹಯೋಗದಲ್ಲಿ ನಡೆಸಲಾಯಿತು.
ಡಾ. ಕಿರ್ತೀ ಮಾತನಾಡಿ, ಪ್ರಥಮ ಚಿಕಿತ್ಸೆಯ ಜ್ಞಾನದ ಅಗತ್ಯತೆಯನ್ನು ತಿಳಿಸುತ್ತಾ ಪ್ರಾಥಮಿಕ ಚಿಕಿತ್ಸೆಯನ್ನು ನಮ್ಮವರಿಗಾಗಿ ನಾವು ತಿಳಿಯಬೇಕಾದದ್ದು ಅತ್ಯಗತ್ಯ. ಕೇವಲ ತಿಳಿದರೆ ಸಾಕಾಗಲ್ಲ ಅದನ್ನು ನಮ್ಮರಿಗೆ ತಿಳಿಸುವ ಹೊಣೆಗಾರಿಕೆಯೂ ನಮ್ಮೆಲ್ಲರ ಮೇಲಿದೆ. ಸಹಾಯವನ್ನು ಬಯಸುವ ಜೀವದ ಸಹಾಯಕ್ಕೆ ಧಾವಿಸಬೇಕಾದರೆ ಮೊಟ್ಟ ಮೊದಲು ನಾವು ಸಹಾಯ ಮಾಡುವ ಯೋಗ್ಯತೆಯನ್ನು ಹೊಂದಿರಬೇಕಾಗುತ್ತದೆ. ನಮ್ಮ ಒಳಗಡೆಯ ಭಯವನ್ನು ದೂರ ಮಾಡಿಕೊಳ್ಳಲು, ನಮ್ಮಿಂದ ನೊಂದ ಜೀವಕ್ಕೆ ಅಪಾಯ ಆಗದಿರಬೇಕಾದರೆ, ನಮ್ಮ ಜೀವ ಸುರಕ್ಷವಾಗಿರಬೇಕಾದರೆ ನಾವು ಪ್ರಾಥಮಿಕ ಚಿಕಿತ್ಸೆಯ ಜ್ಞಾನ ಹೊಂದಿರಲೇ ಬೇಕಾಗುತ್ತದೆ ಎಂದು ತಿಳಿಸುತ್ತಾ ಪ್ರಾತ್ಯಕ್ಷತೆಯ ಮೂಲಕ ಅಗ್ನಿ ಅಪಘಾತ, ಮೂಳೆ ಮುರಿತ, ವಿವಿಧ ಅಂಗಾಂಗಗಳಲ್ಲಿ ಉಂಟಾದ ಗಾಯಗಳ ಪ್ರಥಮ ಚಿಕಿತ್ಸೆಯ ವಿಚಾರಗಳನ್ನು ಮತ್ತು ಸಿಪಿಆರ್ ನಡೆಸುವ ವಿಧಾನಗಳನ್ನು ವಿವರಿಸಿದರು.

ಶ್ರೀ ಸಿದ್ಧಿ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಶರಣ ಕುಮಾರ ಅಧ್ಯಕ್ಷತೆಯ ನೆಲೆಯಲ್ಲಿ ಮಾತನಾಡುತ್ತಾ ಮಾನವೀಯ ಗುಣಗಳು ನಮ್ಮಲ್ಲಿ ಜೀವಂತವಾಗಿರಬೇಕಾದರೆ ಪ್ರಾಥಮಿಕ ಚಿಕಿತ್ಸೆಯ ಜ್ಞಾನ ಅತ್ಯಗತ್ಯ ಎಂದು ತಿಳಿಸುತ್ತಾ ಮಕ್ಕಳ ಸುರಕ್ಷತೆಯ ಬಗ್ಗೆ ಕೆಲವಷ್ಟು ಮಾಹಿತಿಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರದ ಅಧ್ಯಕ್ಷರಾದ ಎಸ್. ಜಯಕರ ಶೆಟ್ಟಿ, ಕಾರ್ಯದರ್ಶಿಗಳಾದ ಸತ್ಯನಾರಾಯಣ ಪುರಾಣಿಕ, ಮತ್ತು ಖಜಾಂಚಿಗಳಾದ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಸುಜಾತಾ ಸದಾರಾಮ್, ಶಿಕ್ಷಕ – ಶಿಕ್ಷಕೇತರ ವೃಂದದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಜಯಂತ್ ಶ್ಯಾನುಭಾಗ್ ನಿರ್ವಹಿಸಿದರೆ, ಚೇತನಾ ಜಿ. ಸ್ವಾಗತಿಸಿದ್ದರು.
















