ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಯಡ್ತರೆ ನಾಕಟ್ಟೆಯಲ್ಲಿ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಪರಿವಾರ ಶಕ್ತಿಗಳ ದಿವ್ಯ ಸನ್ನಿಧಿಯಲ್ಲಿ ಚತುರ್ಥ ಪ್ರತಿಷ್ಠಾವರ್ಧಂತ್ಯುತ್ಸವ ಹಾಗೂ ಸಾನ್ನಿಧ್ಯ ಕಲಶೋತ್ಸವ – ಅನ್ನಸಂತರ್ಪಣೆ, ಬೈದರ್ಕಳ ಸಂದರ್ಶನ, ಅಗೇಲು ಸೇವಾ – ಶ್ರೀ ಪಂಜುರ್ಲಿ ಕೋಲ ಸೇವೆಯು ಜ.25 ರವಿವಾರದಂದು ನಡೆಯಲಿದೆ.
ಬೆಳಿಗ್ಗೆ 8.30 ರಿಂದ ರಾತ್ರಿ 12.30 ರವರೆಗೆ ತನಕ ಕ್ಷೇತ್ರ ತಂತ್ರಿಗಳಾದ ವೇ.ಮೂ. ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಸಾನ್ನಿಧ್ಯ ಕಲಶೋತ್ಸವ – ಅನ್ನಸಂತರ್ಪಣೆ ಹಾಗೂ ಸಾಯಂಕಾಲ 4.30ರಿಂದ ರಾತ್ರಿ 8.00 ರ ತನಕ ಶ್ರೀ ಬ್ರಹ್ಮ ಬೈದರ್ಕಳ ಸಹಿತ ಪರಿವಾರ ಶಕ್ತಿಗಳ ಪ್ರೀತ್ಯರ್ಥ, ಅಗೇಲು ಸೇವೆ – ಬೈದರ್ಕಳ ಸಂದರ್ಶನ – ಗೆಂಡ ಸೇವೆ – ಅನ್ನಸಂತರ್ಪಣೆ ನಡೆಯಲಿದೆ.
ಅದೇ ದಿನ ರಾತ್ರಿ ಶ್ರೀ ಪಂಜುರ್ಲಿ ದೈವದ ಸಾನಿಧ್ಯವೃದ್ಧಿಗೋಸ್ಕರ ಸಿರಿ ಸಿಂಗಾರದ ಕೋಲ ಸೇವೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಅರ್ಚಕ ಕುಟುಂಬದ ಮಂಜುನಾಥ ಮೇಲ್ಹಿತ್ಲು ತಿಳಿಸಿದ್ದಾರೆ.










