ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿಗಳಾದ ಇಬ್ಬರು ವ್ಯಕ್ತಿಗಳಿಗೆ ನ್ಯಾಯಾಲಯವು ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 5,000 ರೂಪಾಯಿ ದಂಡ ವಿಧಿಸಿ ಗುರುವಾರ ತೀರ್ಪು ಪ್ರಕಟಿಸಿದ್ದಾರೆ.
ಶಿಕ್ಷೆಗೆ ಒಳಗಾದವರನ್ನು ಕುಂದಾಪುರದ ಮಾಚಟ್ಟು ಗ್ರಾಮದ ಶರತ್ ಶೆಟ್ಟಿ (32) ಮತ್ತು ಅದೇ ಗ್ರಾಮದ ಪ್ರಶಾಂತ್ ನಾಯ್ಕ್ (28) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಅಮಾಸೆಬೈಲು ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿಯು ಶಾಲೆಗೆ ಹೋಗಿ ಬರುವ ವೇಳೆ ರಿಕ್ಷಾ ಚಾಲಕ ಶರತ್ ಶೆಟ್ಟಿ ಮತ್ತು ಆತನ ಸಹಚರ ಪ್ರಶಾಂತ್ ನಾಯ್ಕ್ ಆಟೋರಿಕ್ಷಾದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು.
ಸಂತ್ರಸ್ತ ಬಾಲಕಿಯು ಈ ಘಟನೆಯ ಬಗ್ಗೆ ತನ್ನ ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿದ್ದಳು. ಶಿಕ್ಷಕರು ನೀಡಿದ ದೂರಿನ ಮೇರೆಗೆ 2025ರ ಜುಲೈ 15ರಂದು ಅಮಾಸೆಬೈಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಕುಂದಾಪುರ ಡಿವೈಎಸ್‌ಪಿ ಎಚ್. ಡಿ. ಕುಲಕರ್ಣಿ ಅವರು ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಆರೋಪಿಗಳು ದೋಷಿಗಳು ಎಂದು ತೀರ್ಮಾನಿಸಿ ಇಂದು ಶಿಕ್ಷೆ ಪ್ರಕಟಿಸಿದೆ.
















