ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಚಲಿಸುತ್ತಿದ್ದ ಫಾರ್ಚೂನರ್ ಕಾರೊಂದು ಡಿವೈಡರ್ ದಾಟಿ ವಿರುದ್ಧ ದಿಕ್ಕಿನ ರಸ್ತೆಯ ಚರಂಡಿಗೆ ಪಲ್ಟಿ ಹೊಡೆದು ಬಿದ್ದ ಘಟನೆ ಸೋಮವಾರ ಮಧ್ಯಾಹ್ನ ಎನ್.ಹೆಚ್-66ರ ಕುಂದಾಪುರ ಕನ್ನುಕೆರೆ ನವಶಕ್ತಿ ಕಲ್ಯಾಣ ಮಂಟಪದ ಎದುರು ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರು ಮಹಾರಾಷ್ಟ್ರದ ಪುಣೆಯ ಲಾ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಒಟ್ಟು 12 ಮಂದಿ ವಿದ್ಯಾರ್ಥಿಗಳು ಜ.31ರಂದು ಎರಡು ಕಾರುಗಳಲ್ಲಿ ದೇಶ ಸುತ್ತುವ ಪ್ರವಾಸಕ್ಕೆ ಹೊರಟಿದ್ದರು. ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪುಣೆಗೆ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಮಧ್ಯಾಹ್ನದ ವೇಳೆಗೆ ತೆಕ್ಕಟ್ಟೆ ಸಮೀಪದ ಕನ್ನುಕೆರೆ ಪ್ರದೇಶದಲ್ಲಿ ಕಾರು ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ಹಾರಿ ವಿರುದ್ಧ ದಿಕ್ಕಿನ ರಸ್ತೆಯ ಚರಂಡಿಗೆ ಕಾರು ಪಲ್ಟಿ ಹೊಡೆದು ಬಿದ್ದಿದೆ. ಅಪಘಾತದ ಪರಿಣಾಮ ಎಲ್ಲರೂ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ಕೂಡಲೇ ಸ್ಥಳೀಯರು ಧಾವಿಸಿ ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ.ಅಪಘಾತಕ್ಕೆ ಚಾಲಕನ ಅತೀವೇಗ ಮತ್ತು ಅಜಾಗರೂಕತೆ ಕಾರಣ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕೋಟ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ಕುಮಾರ್ ಆರ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಕೆ ಕೈಗೊಂಡಿದ್ದಾರೆ.
















