ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಾಸಕ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ ಬೆಂಗಳೂರಿನ ಡಾ. ಆರ್. ಅರುಣಾಲಂ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಲು ಸಂಕ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಂಗಡಿ ಗ್ರಾಮದ ಅಯ್ಯಪ್ಪನಜಡ್ಡು ಕಕ್ಕನಪಾಲು, ಮಚ್ಚಟ್ಟು ಗ್ರಾಮದ ಮಡಿವಾಳ ಕಟ್ಟು, ಆಜ್ರಿ ಗ್ರಾಮದ ತಗ್ಗುಂಜೆ, ಕೆರಾಡಿ ಗ್ರಾಮದ ಕುಳ್ಳಂಬಳ್ಳಿ ಹೊಸಳ್ಳಿಕೊಡ್ಲು ಮತ್ತು ವಂಡ್ಸೆ ಗ್ರಾಮದ ಅಬ್ಬಿ ಬಳಿ ಕಾಲುಸಂಕ ನಿರ್ಮಾಣಕ್ಕೆ ಶಾಸಕ ಗಂಟಿಹೊಳೆ ಹಾಗೂ ಡಾ. ಆರ್. ಅರುಣಾಚಲಂ ಚಾರಿಟೇಬಲ್ ಟ್ರಸ್ಟ್ ಇದರ ಪ್ರವರ್ತಕರಾದ ಕ್ಯಾ. ರಮೇಶ್ ಅರುಣಾಚಲಂ ಅವರೊಂದಿಗೆ ಭೂಮಿ ಪೂಜೆ ನೆರವೇರಿಸಿದರು.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಅರುಣಾಚಲಂ ಟ್ರಸ್ಟ್ ಬೈಂದೂರಿಗರ ಕನಸುಗಳನ್ನು ನನಸು ಮಾಡುತ್ತಿದೆ. ನಮ್ಮ ಬದ್ಧತೆ, ನಮ್ಮ ಇಚ್ಛಾಶಕ್ತಿ ಮತ್ತು ದಾನಿಗಳ ಸಹಕಾರದಿಂದ ಬೈಂದೂರಿನಂತಹ ಗ್ರಾಮೀಣ ಭಾಗದಲ್ಲಿ ಕಾಲು ಸಂಕ ನಿರ್ಮಿಸಿ ಸುಲಭ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ. ಗ್ರಾಮಸ್ಥರು ಸರ್ವಕಾಲದಲ್ಲೂ ಅರುಣಾಲಂ ಸಂಸ್ಥೆಯನ್ನು ನೆನಪಿಟ್ಟುಕೊಳ್ಳಬೇಕು ಎಂದರು.










