ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರುಡ್‌ಸೆಟ್ ಸಂಸ್ಥೆ, ಬ್ರಹ್ಮಾವರ ಇದರ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಮ್. ಇವರ ನೇತೃತ್ವದಲ್ಲಿ ವಿವಿಧ ರಾಜ್ಯಗಳ 65 ಮಂದಿ ಕೆನರಾ ಬ್ಯಾಂಕಿನ ಪ್ರೊಬೆಷನರಿ ಸಿಬ್ಬಂದಿಗಳು ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಇತ್ತೀಚಿಗೆ ಭೇಟಿ ನೀಡಿದರು.
ಈ ಸಂದರ್ಭ ಸಂಘದ ಅಧ್ಯಕ್ಷರಾದ ಡಾ. ಕೃಷ್ಣ ಕಾಂಚನ್ ಅವರು ಸಂಘವು ನಡೆದು ಬಂದ ದಾರಿ, ಸದಸ್ಯತ್ವ, ಸದಸ್ಯರಿಗೆ ಸಂಘದಿಂದ ದೊರಕುವ ವಿವಿಧ ಸಾಲಗಳು, ಸ್ವ ಸಹಾಯ ಸಂಘ ರಚನೆ, ಉಳಿತಾಯ ಕ್ರೋಢೀಕರಣ, ಸಾಲ ವಿತರಣೆ ಮತ್ತು ವಸೂಲಾತಿ, ಸಂಘದ ಸ್ವಂತ ಕಟ್ಟಡಗಳು ಮತ್ತು ಗೋದಾಮುಗಳು, ಸಂಘದ ವ್ಯವಹಾರ ಅಭಿವೃದ್ಧಿ, ಸದಸ್ಯರಿಗೆ ನೀಡಲಾಗುತ್ತಿರುವ ಸೇವೆಗಳು ಮತ್ತು ಸವಲತ್ತುಗಳ ಬಗ್ಗೆ ಅವರಿಗೆ ವಿವರವಾಗಿ ಮಾಹಿತಿ ನೀಡಿದರು.

ಸಂಘದ ಆರ್ಥಿಕ ಅಭಿವೃದ್ಧಿ, ಸಾಲ ನೀಡುವಿಕೆ ಮತ್ತು ವಸೂಲಾತಿ, ಸ್ವಸಹಾಯ ಸಂಘಗಳ ಕಾರ್ಯಚಟುವಟಿಕೆ ಮತ್ತು ಸಂಘದ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಚರ್ಚೆಯ ಮೂಲಕ ವಿಚಾರ ವಿನಿಮಯ ಮಾಡಿಕೊಂಡರು. ಸಂಘದ ವ್ಯವಸ್ಥಿತ ಕಾರ್ಯವೈಖರಿ, ಸೇವಾ ಮನೋಭಾವ ಹಾಗೂ ಕಾರ್ಯತತ್ಪರತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಘದ ಸರ್ವತೋಮುಖ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳನ್ನು ಶ್ಲಾಘಿಸಿದರು. ಸಂಘದ ನೂತನ ವಿಶಿಷ್ಟ ಯೋಜನೆಗಳಲ್ಲಿ ಒಂದಾದ ’ಸಕಲ’ ಕೃಷಿ ಉಪಕರಣಗಳ ಮಾರಾಟ ಮಳಿಗೆಗೆ ಅವರು ಭೇಟಿ ನೀಡಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ aವರು ಭೇಟಿ ನೀಡಿದ ಅಧಿಕಾರಿಗಳನ್ನು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು. ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ರುಡ್‌ಸೆಟ್ ಅಧಿಕಾರಿಗಳೊಂದಿಗೆ ವಿವಿಧ ರಾಜ್ಯಗಳ ಕೆನರಾ ಬ್ಯಾಂಕಿನ ಪ್ರೊಬೆಷನರಿ ಸಿಬ್ಬಂದಿಗಳ ಭೇಟಿ ನೀಡಿದರು. ಸಂಘದ ಅಧ್ಯಕ್ಷರಾದ ಡಾ. ಕೃಷ್ಣ ಕಾಂಚನ್, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಇದ್ದರು.










