ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ,ಫೆ.13: ವರಾಹಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಂಗ್ರಹಿಸಿಡುತ್ತಿದ್ದ ದಂಧೆಯ ಮೇಲೆ ಕೋಟ ಪೊಲೀಸರು ದಾಳಿ ನಡೆಸಿದ್ದು, ಹಳ್ನಾಡಿನ ದೇವಾನಂದ ಶೆಟ್ಟಿ ಹಾಗೂ ಉತ್ತರ ಪ್ರದೇಶ ಮೂಲದ 21 ಮಂದಿ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಫೆ.12 ರಂದು ಮಧ್ಯಾಹ್ನ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಮೊಳಹಳ್ಳಿ ಗ್ರಾಮದ ಮರತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪವಿರುವ ಖಾಲಿ ಜಾಗಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಸುಮಾರು 15 ರಿಂದ 20 ಮಂದಿ ಕಾರ್ಮಿಕರು ನದಿಯಿಂದ ತೆಗೆದ ಮರಳನ್ನು ರಾಶಿ ಹಾಕುತ್ತಿರುವುದು ಕಂಡುಬಂದಿದೆ. ಅಲ್ಲದೆ ಪಕ್ಕದ ಹೊಳೆಯಲ್ಲಿ ಮರಳು ತೆಗೆಯಲು ಬಳಸುತ್ತಿದ್ದ ಮೂರು ಬೋಟ್ಟ್‌ಗಳು ಪತ್ತೆಯಾಗಿವೆ.
ಸ್ಥಳದಲ್ಲಿದ್ದ ಕೆಲಸಗಾರರನ್ನು ವಿಚಾರಿಸಿದಾಗ, ಹಳ್ನಾಡಿನ ದೇವಾನಂದ ಶೆಟ್ಟಿ ಎಂಬುವವರು ಮರಳು ತೆಗೆಯಲು ಸೂಚಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲಿಸಿದಾಗ, ಈ ಮರಳುಗಾರಿಕೆಗೆ ಯಾವುದೇ ಅಧಿಕೃತ ಪರವಾನಿಗೆ ಇಲ್ಲದಿರುವುದು ದೃಢಪಟ್ಟಿದೆ.
ಪೊಲೀಸರು ಸ್ಥಳದಲ್ಲಿದ್ದ ಸುಮಾರು 315 ಯೂನಿಟ್ ಮರಳು, ಮರಳು ತೆಗೆಯಲು ಬಳಸುತ್ತಿದ್ದ 3 ಫೈಬರ್ ಬೋಟ್, 6 ಕಬ್ಬಿಣದ ಹಾರೆ ಹಾಗೂ 8 ಫೈಬರ್ ಬುಟ್ಟಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಲಾಭ ಗಳಿಸುವ ಉದ್ದೇಶದಿಂದ ಸಂಘಟಿತವಾಗಿ ಈ ಅಕ್ರಮ ಕಳವು ಮತ್ತು ಮಾರಾಟ ದಂಧೆ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















