ಕುಂದಾಪ್ರ ಡಾಟ್ ಕಾ ಸುದ್ದಿ.
ಕುಂದಾಪುರ: “ವ್ಯಕ್ತಿಗಿಂತ ದೇಶ ದೊಡ್ಡದು. ದೇಶದ ಅಭಿವೃದ್ಧಿಯ ಪ್ರತಿ ಹಂತದಲ್ಲೂ ನಮ್ಮ ಕೊಡುಗೆ ಇರಬೇಕು” ಎಂದು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇದರ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಕೆ. ಜಯಪ್ರಕಾಶ್ ರಾವ್ ಹೇಳಿದರು.
ಅವರು ಮಂಗಳವಾರ ಭಂಡಾರ್ಕಾರ್ಸ್ ಕಾಲೇಜಿನ ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶದ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ “ತಿಂಗಳ ಅತಿಥಿ” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಭಾರತವು ಶಾಂತಿಪ್ರಿಯ ರಾಷ್ಟ್ರ. ಯುದ್ಧದಿಂದ ಮಾನವೀಯತೆ ಕುಸಿಯುತ್ತದೆ. ಸಾವು -ನೋವುಗಳಾಗುತ್ತವೆ ಹೊರತು ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.

ತಾಂತ್ರಿಕವಾಗಿ ಮತ್ತು ಬಾಹ್ಯಾಕಾಶ, ಉಪಗ್ರಹ ಮತ್ತು ಸೇನಾ ವಲಯದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಹೊಂದುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡ ನಾವುಗಳು ಜಗತ್ತಿನ ಪ್ರಬಲ ದೇಶಗಳಿಗೆ ಪೈಪೋಟಿ ಕೊಡುವಷ್ಟು ಬೆಳೆದಿದ್ದೇನೆ. ಇದರ ಹಿಂದೆ ನಮ್ಭಮದೇ ದೇಶದ ಪ್ರತಿಭಾನ್ವಿತ ವಿಜ್ಞಾನಿಗಳು, ಅಭಿಯಂತರರು ತಂತ್ರಜ್ಞರು ತಮ್ಮ ಕೊಡುಗೆ ನೀಡಿದ್ದಾರೆ. ಅದರಲ್ಲೂ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರವರ ಕೊಡುಗೆ ಅತಿ ದೊಡ್ಡದು. ಅವರನ್ನು ಆಧುನಿಕ ಭಾರತದ ಕ್ಷಿಪಣಿ ಮನುಷ್ಯ ಎಂದು ಕರೆಯಲಾಗುತ್ತದೆ. ಅವರು ಕೇವಲ ಬಾಹ್ಯಾಕಾಶವನ್ನು ಬೆಳೆಸಲಿಲ್ಲ. ಮಾನವೀಯತೆ, ಭ್ರಾತೃತ್ವ, ಸಹಬಾಳ್ವೆ, ರಾಷ್ಟ್ರೀಯತೆಯನ್ನು ಬೆಳೆಸಿದರು. ಅವರೊಂದಿಗೆ ಒಡನಾಟವೇ ಅದ್ಭುತ ಎಂದು ಹೇಳಿದರು. ಅಲ್ಲದೇ ಕಲಾಂ ಅವರ ಭಾಷಣ, ಭ್ರಾತೃತ್ವದ ಸಂದೇಶಗಳ ವಿಡಿಯೋ ಮತ್ತು ಡಿ.ಅರ್.ಡಿ.ಓ, ವಾಯುಪಡೆ ಕುರಿತ ವಿಡಿಯೋವನ್ನು ವಿದ್ಯಾರ್ಥಿಗಳಿಗೆ ತೋರಿಸಿದರು.
ಇನ್ನೋರ್ವ ಅತಿಥಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೋಮಶೇಖರ್ ಪಡುಕೆರೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು “ಕೆಲವೊಂದು ಸಂದರ್ಭದಲ್ಲಿ ಪತ್ರಿಕೋದ್ಯಮದಲ್ಲಿ ನಾವು ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ಬರೆಯಲು ಸಾಧ್ಯವಾಗುವುದಿಲ್ಲ, ಆ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸುವ ಚಾಕಚಕ್ಯತೆ ಪತ್ರಕರ್ತನಿಗೆ ಇರಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು. ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ನಿಶಾ ಎಮ್., ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶದ ಸಂಯೋಜಕರಾದ ಸತ್ಯನಾರಾಯಣ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶಶಿಕಾಂತ ಹತ್ವಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಥಮ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿನಿ ಕೀರ್ತಿ ಪಟಗಾರ ನಿರೂಪಿಸಿದರು.
















