ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಅಂಪಾರು ಸಂಜಯ ಗಾಂಧಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ರಿ. ಅಂಪಾರು ಹಾಗೂ ಆಚಾರ್ಯ ಅಕಾಡೆಮಿ ಸಿದ್ದಾಪುರ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆ – 2026 ಗುರುವಾರದಂದು ವಿದ್ಯಾದಾಯಿನಿ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.
ವಿವಿಧ ಹಂತಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅಸಾಮಾನ್ಯ ಗಣಿತ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಸ್ಪರ್ಧೆಯ ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಪಾರು ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ರಿ. ಇದರ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ವಹಿಸಿ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ ತರಬೇತಿ ವಿದ್ಯಾರ್ಥಿಗಳಲ್ಲಿ ವೇಗವಾದ ಚಿಂತನೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಇಂತಹ ಸ್ಪರ್ಧೆಗಳು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸಲು ಮಹತ್ತರ ವೇದಿಕೆಯಾಗಿವೆ ಎಂದು ಹೇಳಿದರು.
ಟ್ರಸ್ಟ್ ನ ಖಜಾಂಚಿ ಹಾಗೂ ಶೈಕ್ಷಣಿಕ ಸಂಚಾಲಕರಾದ ಸುಭಾಷ್‌ಚಂದ್ರ ಶೆಟ್ಟಿ ಕೊಡ್ಲಾಡಿ ಅವರು ಮಾತನಾಡಿ, ಅಬಾಕಸ್ ಅಭ್ಯಾಸವು ಮಕ್ಕಳ ಗಣಿತದ ಮೇಲಿನ ಭಯವನ್ನು ದೂರ ಮಾಡಿ ಅವರ ಮೆದುಳಿನ ಚುರುಕನ್ನು ಹೆಚ್ಚಿಸುತ್ತದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಲು ಸಹಾಯಕವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಜೆಸಿಐ ಹಾಲಾಡಿ ಇದರ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಅವರು ವಿಜೇತರನ್ನು ಅಭಿನಂದಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಪಾರ ಸಾಮರ್ಥ್ಯ ಅಡಗಿದೆ. ನಿರಂತರ ಅಭ್ಯಾಸ ಮತ್ತು ಶ್ರಮದ ಮೂಲಕ ಅವರು ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಬಹುದು ಎಂದು ಹೇಳಿದರು.
ಶಾಲೆಯ ಆಡಳಿತಾಧಿಕಾರಿಯಾದ ಚೈತ್ರಾ ಯಡಿಯಾಳ ಅವರು ಮಾತನಾಡಿ, ಶಾಲೆಯಲ್ಲಿ ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ ತರಬೇತಿಯನ್ನು ಪಠ್ಯಕ್ರಮದ ಭಾಗವಾಗಿ ನೀಡಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಚಿಂತನೆ ಮತ್ತು ಗಣನೆ ಸಾಮರ್ಥ್ಯದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ ಎಂದು ತಿಳಿಸಿದರು. ಜೊತೆಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಚಾರ್ಯ ಅಕಾಡೆಮಿ ಸಿದ್ದಾಪುರದ ಶ್ರೇಯಾ ಅವರು ಬಹುಮಾನ ವಿತರಣಾ ಸಮಾರಂಭವನ್ನು ಮುನ್ನಡೆಸಿ ವಿಜೇತರನ್ನು ಅಭಿನಂದಿಸಿದರು.
ಸ್ಪರ್ಧೆಯಲ್ಲಿ ಮೆರೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ “Champion of Champions”, “Champion” ಹಾಗೂ “Topper” ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಪ್ರತಿಯೊಂದು ಹಂತದಲ್ಲೂ ಮೂವರು ವಿದ್ಯಾರ್ಥಿಗಳಿಗೆ ಸಾಂತ್ವನ ಬಹುಮಾನ ನೀಡಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಅಬಾಕಸ್ ಶಿಕ್ಷಕಿ ಸೌಭಾಗ್ಯಲಕ್ಷ್ಮಿ ಅವರು ವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿದರು.
ಈ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ಗಣಿತದ ಮೇಲೆ ಆಸಕ್ತಿ, ವೇಗದ ಚಿಂತನೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮಹತ್ವದ ಪಾತ್ರವಹಿಸಿದೆ ಎಂದು ಸಂಘಟಕರು ತಿಳಿಸಿದ್ದಾರೆ.
















