ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಬಜೆಟ್ಅಧಿವೇಶನನದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಬಗ್ಗೆ ಹಲವಾರು ದಶಕಗಳಿಂದ ಸಾರ್ವಜನಿಕರಿಂದ ಬೇಡಿಕೆ ಇರುವ ವಿಚಾರ ಸರಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಬಗ್ಗೆ ಸರಕಾರದ ನಿಲುವೇನು ಎಂದು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಅವರು ಉಡುಪಿ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಬಗ್ಗೆ ಬೇಡಿಕೆ ಇರುವ ವಿಚಾರ ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಬೇಕೆಂಬುದು ಸರ್ಕಾರದ ನೀತಿಯಾಗಿರುತ್ತದೆ. ಉಡುಪಿ ಜಿಲ್ಲೆಯೂ ಸೇರಿದಂತೆ ವೈದ್ಯಕೀಯ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಬಗ್ಗೆ ಪೂರ್ವ ಭಾವಿ ಸಭೆಯನ್ನು ನಡೆಸಲಾಗಿದ್ದು, iDECK ಸಂಸ್ಥೆಯನ್ನು Transaction Advisor ಆಗಿ ನೇಮಿಸಲಾಗಿದೆ.
ರಾಜ್ಯ ಸರ್ಕಾರದ ವತಿಯಿಂದ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಅಂದಾಜು ರೂ. 610 ಕೋಟಿ ಗಳ ಅನಾವರ್ತಕ ವೆಚ್ಚ ಹಾಗೂ ರೂ 60 ಕೋಟಿಗಳ ಆವರ್ತಕ ವೆಚ್ಚದ ಅವಶ್ಯಕತೆ ಇರುತ್ತದೆ. ಅದರಂತೆ ಅನುದಾನದ ಲಭ್ಯತೆಯನ್ನು ಅಧರಿಸಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಹೊಂದಿರದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಪರಿಶೀಲಿಸಲಾಗುವುದು ಎಂದು ಸಚಿವರು ಶಾಸಕರು ಪ್ರಶ್ನೆಗೆ ಉತ್ತರಿಸಿದ್ದಾರೆ.
ಬೈಂದೂರು ಅಥವಾ ಕುಂದಾಪುರ ಭಾಗದಲ್ಲಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆಗೆ ಒತ್ತಾಯ ಪಡಿಸಿದ ಶಾಸಕರು:
ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಕುಂದಾಪುರ ಭಾಗಗಳಲ್ಲಿ ಸಮರ್ಪಕವಾದ ಸೂಕ್ತ ಆಸ್ಪತ್ರೆಗಳಿಲ್ಲದ ಕಾರಣ ಮತ್ತು ಸೂಕ್ತ ಸರಕಾರಿ ಜಾಗದ ಲಭ್ಯತೆ ಹಾಗೂ ಈ ಭಾಗದಲ್ಲಿ ಇತ್ತೀಚಿಗೆ ರಸ್ತೆ ಅಪಘಾತ ಸಮಯದಲ್ಲಿ ಸಕಾಲದಲ್ಲಿ ತ್ವರಿತ ಚಿಕಿತ್ಸೆ ಸಿಗದೇ ಸಾಕಷ್ಟು ಜನ ಪ್ರಾಣ ಕಳೆದು ಕೊಳ್ಳುತ್ತಿರುವುದರಿಂದ ಈ ಭಾಗದಲ್ಲಿಯೇ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಜೂರು ಮಾಡಲು ಶಾಸಕರು ಸಚಿವರನ್ನು ಒತ್ತಾಯಿಸಿದ್ದಾರೆ.










