ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರದಂದು ಯುಕೆಜಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭವು ಸಡಗರದಿಂದ ಸಂಪನ್ನಗೊಂಡಿತು. ಮಕ್ಕಳ ಪ್ರಾರಂಭಿಕ ವಿದ್ಯಾಭ್ಯಾಸದ ಪಯಣವನ್ನು ಸಂಭ್ರಮಿಸುವ ಈ ಸಮಾರಂಭದಲ್ಲಿ ಪುಟಾಣಿ ವಿದ್ಯಾರ್ಥಿಗಳು ಅಭಿನಂದನೆಗೆ ಪಾತ್ರರಾದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಆತ್ರಾಡಿಯ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ದೀಪಿಕಾ ಸುಭಾಷ್ ಶೆಟ್ಟಿ, ಅವರು ಮಕ್ಕಳಿಗೆ ಪದವಿ ಪ್ರಮಾಣಪತ್ರ ವಿತರಿಸಿ, ಅವರ ಶೈಕ್ಷಣಿಕ ಪ್ರಗತಿಯು ಸುಗಮವಾಗಲೆಂದು ಶುಭ ಹಾರೈಸಿದರು. ತಮ್ಮ ಅತಿಥಿ ಭಾಷಣದಲ್ಲಿ, “ಮನೆಯೇ ಮೊದಲ ಪಾಠಶಾಲೆ, ಮಕ್ಕಳಿಗೆ ಸಂಸ್ಕಾರ ಕಲಿಸುವುದರಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಶಿಸ್ತು, ಸಂಯಮ, ಭಕ್ತಿ-ಭಾವ, ಗುರು ಹಿರಿಯರನ್ನು ಗೌರವಿಸುವುದು ಮುಂತಾದ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರೊಂದಿಗೆ ಎಲ್ಲಾ ಪಾಲಕ/ಪೋಷಕರು ಕೈ ಜೋಡಿಸಿದರೆ ಮಾತ್ರ ಸಂಸ್ಕಾರಭರಿತ ಮಗುವೊಂದು ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳನ್ನು ಶಾಲೆಗೆ ಕಳುಹಿಸಿದ ಮೇಲೆ ಪೋಷಕರ ಜವಾಬ್ದಾರಿ ಮುಗಿಯಿತೆಂದು ಭಾವಿಸದೇ, ಆ ಕ್ಷಣದಿಂದಲೇ ಪೋಷಕರ ಜವಾಬ್ದಾರಿ ಇಮ್ಮಡಿಯಾಗುತ್ತದೆಂದು ತಿಳಿಯಬೇಕು. ನಾವು ಸೇವಿಸುವ ಆಹಾರವು ನಮ್ಮ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವುದರಿಂದ ಆರೋಗ್ಯಕರ ಆಹಾರ ಪದ್ಧತಿಯನ್ನು ಮಗುವು ರೂಢಿಸಿಕೊಳ್ಳುವಂತೆ ಪೋಷಕರು ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಯುಕೆಜಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಬಗ್ಗೆ ಹಾಗೂ ಪೂರ್ವ ಪ್ರಾಥಮಿಕ ವಿದ್ಯಾಭ್ಯಾಸದ ಅನುಭಗಳನ್ನು ಹಂಚಿಕೊಂಡ ಪುಟಾಣಿಗಳು, ಶಿಕ್ಷಕರ ಪ್ರೇರಣೆಗೆ ಕೃತಜ್ಞತೆ ವ್ಯಕ್ತಪಡಿಸಿದರು. ಜೊತೆಗೆ ವಿದ್ಯಾರ್ಥಿಗಳ ಹಾಡು, ನೃತ್ಯ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭದ ಮೆರುಗನ್ನು ಹೆಚ್ಚಿಸಿದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿಯವರಾದ ವೀಣಾರಶ್ಮಿ ಎಂ., ಮುಖ್ಯೋಪಾಧ್ಯಾಯಿನಿಯಾಗಿರುವ ಸುಜಾತಾ ಸದಾರಾಮ್, ಶಿಕ್ಷಕ-ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸನ್ಮಯ್, ಇಶಾನಿ, ಸಿಂಚನಾ ಮತ್ತು ಅನ್ಹಾ ಲವಲವಿಕೆಯ ನಿರೂಪಣೆ ನೀಡಿದರು.
















