ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರಂಜಾನ್ ಮಾಸ ಪವಿತ್ರವಾದ ಮಾಸದ ಜೊತೆಗೆ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪಸರಿಸಿಕೊಂಡಿದೆ ಎಂದು ಹೂಡೆ ಐಡಿಯಲ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಇದ್ರಿಸ್ ಹೂಡೆ ಹೇಳಿದರು.
ಅವರು ಶುಕ್ರವಾರ ರಂಜಾನ್ ಹಬ್ಬದ ಪ್ರಯುಕ್ತ ಕೋಟ ಜಾಮಿಯಾ ಮಸ್ಜಿದ್ ಇಲ್ಲಿ ರಮದಾನ್ ಈದ್ ಸಂದೇಶ 2026 ಅರ್ಹರಿಗೆ ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಸಹಾಯಧನ ಚೆಕ್ ವಿತರಿಸಿ ಮಾತನಾಡಿದರು. ಕುರಾನ್ ಉದ್ದೇಶ ಜಗತ್ತದಲ್ಲಿ ಸೌಹಾರ್ದತೆ, ಶಾಂತಿ, ನೆಮ್ಮದಿಯ ವಾತಾವರಣದ ಜೊತೆಗೆ ಬೆರೆತು ಜೀವಿಸುವುದಾಗಿದೆ, ಈ ದಿಸೆಯಲ್ಲಿ ರಂಜಾನ್ ಮಾಸದ ಉಪವಾಸ ಅರ್ಥಪೂರ್ಣ ಭಕ್ತಿಯೊಂದಿಗೆ ಸಾಮರಸ್ಯದ ಬದುಕಿಗೆ ಮುನ್ನುಡಿ ಬರೆದಿದೆ ಇದಕ್ಕೆ ಕೋಟದ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.
ಇದೇ ವೇಳೆ ಆಯ್ದ ಹಿಂದೂ ಅಶಕ್ತ,ಅನಾರೋಗ್ಯ ಪೀಡಿತರಿಗೆ ನೆರವನ್ನು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಕೋಟತಟ್ಟುವಿನ ಎಂಟು ಕೊರಗ ಕುಟುಂಬಗಳಿಗೆ ಚೇರ್ ಅನ್ನು ಹಸ್ತಾಂತರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕೋಟ ಜಾಮಿಯಾ ಮಸ್ಜಿದ್ ಅಧ್ಯಕ್ಷ ಪ್ಲೆಸೆಂಟ್ ಇಬ್ರಾಹಿಂ ಸಾಹೇಬ್ ಕೋಟ ವಹಿಸಿ ಸ್ವಾಗತಿಸಿ,ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋಟ ಜಾಮಿಯಾ ಮಸ್ಜಿದ್ ಧರ್ಮಗುರು ಮೌಲಾನಾ ಸಮೀಉರ್ರಾಹಮನ್ ರಂಜಾನ್ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಕೋಟತಟ್ಟು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕುಂದರ್, ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ. ಶೆಟ್ಟಿ, ಕೋಟತಟ್ಟು ಪಂಚಾಯತ್ ಪಿಡಿಒ ರವೀಂದ್ರ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಸ್ಜಿದ್ ಸಮಿತಿ ಕಾರ್ಯದರ್ಶಿ ಬಷೀರ್ ಸಾಹೇಬ್ ನಿರೂಪಿಸಿದರು. ಆಸಿಫ್ ತೆಕ್ಕಟ್ಟೆ ವಂದಿಸಿದರು. ಇದಾದ ಬಳಿಗ ಸಿಹಿ ಹಂಚಿ ರಂಜಾನ್ ಹಬ್ಬವನ್ನು ಆಚರಿಸಿಕೊಂಡರು.
















