ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನನದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಅಮೃತ್ 2.0 ಕುಡಿಯುವ ನೀರಿನ ಯೋಜನೆ ಅನುಷ್ಠಾನ ಸಹಿತ ಕುಡಿಯುವ ನೀರಿನ ಶಾಶ್ವತ ಯೋಜನೆ ಅನುಷ್ಠಾನ ದ ಮೂಲಕ 24/7 ಮಾದರಿಯಲ್ಲಿ ನಾಗರಿಕರಿಗೆ ನೀರು ಪೂರೈಕೆಗೆ ಕ್ರಮ ವಹಿಸಲು ಗಮನ ಸೆಳೆಯುವ ಸೂಚನೆ ಮೂಲಕ ನಿಯಮ 73 ರಡಿ ಸದನದ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವರಾದ ಬಿ.ಎಸ್. ಸುರೇಶ್ ಅವರು ಪ್ರಸ್ತುತ ಪಟ್ಟಣಕ್ಕೆ ನದಿ ಮೂಲದಿಂದ ಶಾಶ್ವತವಾದ ನೀರು ಸರಬರಾಜು ಯೋಜನೆ ಇಲ್ಲದಿರುವುದರಿಂದ ಪ್ರಸ್ತುತ ಕೊಳವೆ ಬಾವಿ ಮತ್ತು ತೆರೆದ ಬಾವಿಗಳಿಂದ ಸುಮಾರು 0.60 MLD ಯಷ್ಟು ನೀರು ಸರಬರಾಜು ಮಾಡಲಾಗುತ್ತಿದೆ. ಅಮೃತ್ 2.0 ಯೋಜನೆಯಡಿಯಲ್ಲಿ ಬೈಂದೂರು ಪಟ್ಟಣಕ್ಕೆ ರೂ. 47.25 ಕೋಟಿಗಳ ಮೊತ್ತವನ್ನು ನಿಗದಿ ಪಡಿಸಿರುವುರಿಂದ ಲಭ್ಯವಿದ್ದ ಅನುದಾನಕ್ಕೆ 187 ಕಿ. ಮೀ ವಿತರಣಾ ಜಾಲದ ಅಳವಡಿಕೆ ಹಾಗೂ 3125 ಗೃಹ ಸಂಪರ್ಕ ಗಳನ್ನು ಒದಗಿಸುವ ರೂ. 47 ಕೋಟಿಗಳ ಅಂದಾಜು ಪಟ್ಟಿಯನ್ನು ಕ.ನ. ನೀ.ಸ ಮತ್ತು ಒ. ಚ. ಮಂಡಳಿ ವತಿಯಿಂದ ತಯಾರಿಸಿದ್ದು ಬೈಂದೂರು ಪಟ್ಟಣ ಪಂಚಾಯತಿಯು ಸುತ್ತ ಮುತ್ತಲಿನ ಚದುರಿದ ಹಲವು ಗ್ರಾಮಗಳನ್ನು ಒಗ್ಗೂಡಿಸಿ ರಚನೆಯಾಗಿರುವುದರಿಂದ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಸುಮಾರು 358 ಕೀ. ಮೀ ಉದ್ದದಷ್ಟು ನೀರು ಸರಬರಾಜು ವಿತರಣಾ ಜಾಲವನ್ನು ಅಳವಡಿಸುವುದು ಆರ್ಥಿಕವಾಗಿ ಕಾರ್ಯ ಸಾಧುವಲ್ಲದ ಕಾರಣದಿಂದಾಗಿ ಅಮೃತ್ 2.0 ಯೋಜನೆಯಿಂದ ಕೈ ಬಿಡಲು ರಾಜ್ಯ ಮಟ್ಟದ ಟೆಕ್ನಿಕಲ್ ಸಮಿತಿಯು ನಿರ್ಣಯಿಸಿರುತ್ತದೆ.
ಬೈಂದೂರು ಪಟ್ಟಣಕ್ಕೆ ವಾರಾಹಿ ನದಿ ಮೂಲದ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಕಾಯ್ದಿರಿಸಲಾಗಿರುವ ಸಗಟು ನೀರನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸರಬರಾಜು ಮಾಡಲು ಅಗತ್ಯವಿರುವ ನೀರು ಸರಬರಾಜು ವಿತರಣಾ ಜಾಲದ ಅಳವಡಿಕೆ ಹಾಗೂ ಗೃಹ ಸಂಪರ್ಕಗಳನ್ನು ಒದಗಿಸುವ ಪ್ರತ್ಯೇಕ ಅಂದಾಜು ಪಟ್ಟಿಯನ್ನು ಪರಿಷ್ಕರಿಸಿ ಮಂಡಳಿಯಿಂದ ಪ್ರಸ್ತಾವನೆ ಸ್ವೀಕೃತವಾದ ನಂತರ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ.










