ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಇಡೀ ಮನೆ ಸುಟ್ಟು ಕರಕಲಾದ ಘಟನೆ ಶನಿವಾರ ತಡರಾತ್ರಿ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಸಮೀಪದ ಹಂದಕುಂದ ಎಂಬಲ್ಲಿ ನಡೆದಿದೆ.
ಹಂದಕುಂದ ಅರೆಕಲ್ಲು ಮನೆಯ ಗಣಪು ಶೆಡ್ತಿ ಎಂಬವರು ತನ್ನ ಮೊಮ್ಮಗನೊಂದಿಗೆ ಮನೆಯ ಹತ್ತಿರದ ಭಜನಾ ಕಾರ್ಯಕ್ರಮಕ್ಕಾಗಿ ಮನೆಗೆ ಬೀಗ ಹಾಕಿ ತೆರಳಿದ್ದರು. ರಾತ್ರಿ 12 ಗಂಟೆ ನಂತರ ಮನೆಯಲ್ಲಿನ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ನಸುಕಿನ ವೇಳೆ 2 ಗಂಟೆಯ ಸುಮಾರಿಗೆ ಮನೆಯ ಹತ್ತಿರದ ದಾರಿಯಲ್ಲಿ ಹೋಗುತ್ತಿದ್ದವ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ, ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ಆದರೆ ಅದಾಗಲೇ ಬೆಂಕಿಯ ಕೆನ್ನಾಲಿಗೆ ಇಡೀ ಮನೆಗೆ ವ್ಯಾಪ್ತಿದ್ದು, ಮನೆಯ ಮಾಡು, ಗೋಡೆಗಳಿಗೆ ಹಾನಿಯಾಗಿದೆ.
ಮನೆ ಒಳಗಿದ್ದ ಚಿನ್ನಾಭರಣ, ನಗದು, ಟಿವಿ, ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಬರೆ, ಪಾತ್ರೆಗಳೆಲ್ಲವೂ ಸುಟ್ಟು ಕರಕರಲಾಗಿದೆ. ಇದರಿಂದ ಸುಮಾರು 5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬಳಿಕ ಕುಂದಾಪುರದ ಅಗ್ನಿ ಶಾಮಕ ದಳದ ತಂಡದವರು, ಸ್ಥಳೀಯರೆಲ್ಲ ಸೇರಿ, ಬೆಂಕಿ ನಂದಿಸುವ ಮೂಲಕ ಹತ್ತಿರದಲ್ಲಿದ್ದ ದನದ ಕೊಟ್ಟಿಗೆಗೆ ಬೆಂಕಿ ಹರಡವುದನ್ನು ತಪ್ಪಿಸಿದ್ದಾರೆ.

ಶಾಸಕರ ಭೇಟಿ:
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವನ ಹೇಳಿದರು. ಅಧಿಕಾರಿಗಳೊಂದಿಗೆ ಮಾತನಾಡಿ, ನಷ್ಠ ಪರಿಹಾರವನ್ನು ಶೀಘ್ರವಾಗಿ ವದಗಿಸಿಕೊಂಡುವಂತೆ ಸೂಚಿಸಿದರು.
















