ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಇಂದಿನ ದಿನಗಳಲ್ಲಿ ನಮ್ಮ ಸುತ್ತಲಿನ ಪರಿಸರದಲ್ಲೇ ಅಪಾರ ಮಾಹಿತಿಯಿದ್ದು, ಅದನ್ನು ಅರಿಯಲು ಸದಾ ಮೊಬೈಲ್ ಅಥವಾ ಇಂಟರ್‌ನೆಟ್ ಅವಶ್ಯಕವಿಲ್ಲ. ವಿದ್ಯಾರ್ಥಿಗಳು ತಮ್ಮ ಸುತ್ತಲಿನ ವಸ್ತುಗಳನ್ನು ಗಮನಿಸುವ ಮೂಲಕವೇ ಬಹಳಷ್ಟು ಕಲಿಯಬಹುದು ಎಂದು ಮಾಹೆಯ ಸೌರ ಭೌತಶಾಸ್ತ್ರ ಸಂಶೋಧಕ ಅತುಲ್ ಭಟ್ ಹೇಳಿದರು.
ಆಳ್ವಾಸ್ ಶಾಲೆ ಆಯೋಜಿಸಿದ್ದ ‘ಖಗೋಳಶಾಸ್ತ್ರ ಬೇಸಿಗೆ ಶಿಬಿರ 2026ʼ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನವನ್ನು ಬಳಸುವ ವೇಳೆ ವಿದ್ಯಾರ್ಥಿಗಳು ತಮ್ಮ ಚಿಂತನಾ ಶಕ್ತಿ ಮತ್ತು ನೆನಪಿನ ಸಾಮರ್ಥ್ಯವನ್ನು ಕಳೆದುಕೊಳ್ಳಬಾರದು ಎಂದು ತಿಳಿಸಿದರು.ಹಿಂದಿನ ದಿನಗಳಲ್ಲಿ ಮೊಬೈಲ್‌ಗಳಿಲ್ಲದೆ ಅನೇಕ ದೂರವಾಣಿ ಸಂಖ್ಯೆಗಳನ್ನೇ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದೆವು. ಆದರೆ ಈಗ ತಂತ್ರಜ್ಞಾನಕ್ಕೆ ಅತಿಯಾಗಿ ಅವಲಂಬಿತರಾಗಿರುವುದರಿಂದ ನೆನಪಿನ ಶಕ್ತಿ ಕುಂದುತ್ತಿದೆ ಎಂದರು.

ತಮ್ಮ ಬಾಲ್ಯಯದ ಅನುಭವವನ್ನು ಹಂಚಿಕೊಂಡ ಅವರು, ಖಗೋಳಶಾಸ್ತ್ರ ಕಲಿಯಲು ಸೌಲಭ್ಯಗಳಿಲ್ಲದ ಸಂದರ್ಭದಲ್ಲೂ ಪರಿಶ್ರಮದಿಂದ ನಕ್ಷತ್ರಗಳನ್ನು ಗುರುತಿಸಿ ಕಲಿತಿದ್ದೇವೆ. ಆ ರೀತಿಯ ಪ್ರಯತ್ನವೇ ನಿಜವಾದ ಜ್ಞಾನವನ್ನು ನೀಡುತ್ತದೆ. ಇಂದಿನ ಕಾಲದಲ್ಲಿ ಮೊಬೈಲ್ ಆ್ಯಪ್‌ಗಳ ಮೂಲಕ ನಕ್ಷತ್ರಗಳನ್ನು ಸುಲಭವಾಗಿ ಗುರುತಿಸಬಹುದು. ಆದರೆ ಅದರಿಂದ ವಿಷಯವನ್ನು ಆಳವಾಗಿ ಅರಿಯುವ ಮನೋಭಾವ ಕಡಿಮೆಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸ್ವತಃ ಆಕಾಶವನ್ನು ಗಮನಿಸಿ ನಕ್ಷತ್ರಗುಚ್ಛಗಳನ್ನು ಗುರುತಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಿಬಿರದಲ್ಲಿ ವಿವಿಧ ಚಟುವಟಿಕೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಕಾಶವನ್ನು ಒಂದು ಮಟ್ಟಿಗೆ ಅರ್ಥಮಾಡಿಕೊಂಡಿದ್ದರೂ, ಸಹ ಚಿಕ್ಕ ವಯಸ್ಸಿನಿಂದಲೇ ಅನ್ವೇಷಿಸುವುದು ಒಳ್ಳೆಯ ಹವ್ಯಾಸ. ಆಕಾಶ ಮತ್ತು ಸಮುದ್ರದಲ್ಲಿ ಅನ್ವೇಷಿಸಲು ಇನ್ನೂ ಅನೇಕ ವಿಷಯಗಳಿವೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಭೂಭಾಗದಲ್ಲಿಯೂ ಈಗಾಗಲೇ ಅನೇಕ ವಿಷಯಗಳನ್ನು ಅನ್ವೇಷಿಸಲಾಗಿದೆ ಆದರೂ ಪ್ರತಿಯೊಬ್ಬರಿಗೂ ಅಪಾರ ಅವಕಾಶಗಳಿವೆ. ಆ ಅವಕಾಶಗಳನ್ನು ಬಳಸಿಕೊಳ್ಳುವುದು ನಮ್ಮ ಕೈಯಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿ ನಾಸಾ ವಿಜ್ಞಾನಿ ಪ್ರಕೃತಿ ಪ್ರಕಾಶ್ ಶಾಲಾ ಪ್ರಾಂಶುಪಾಲರಾದ ಶೈಲಜಾ ಬೋಳ ಹೆಗ್ಡೆ ಶಾಲಾ ಆಡಳಿತ ಅಧಿಕಾರಿ ನಿತೇಶ್ ಮಾರ್ನಾಡ್ ಸಹಾಯಕ ಆಡಳಿತ ಅಧಿಕಾರಿ ರಾಜೇಶ್, ಕಾರ್ಯಕ್ರಮ ಸಂಯೋಜಕಕರಾದ ಸೌಮ್ಯ ಆದಿತ್ಯ, ಅಶ್ವಿನಿ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿಶಾ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.
















