ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಕ್ಷಗಾನದಲ್ಲಿ ಕೋಟ ವೈಕುಂಠರ ಪಾತ್ರ ಗಣನೀಯವಾದದ್ದು ಎಂದು ಕೋಟದ ಅಮೃತೇಶ್ವರೀ ಮೇಳದ ಯಜಮಾನ ಆನಂದ್ ಸಿ. ಕುಂದರ್ ಹೇಳಿದರು.
ಅವರು ಬುಧವಾರ ಕೋಟತಟ್ಟು ಬಾರಿಕೆರೆ ಹತ್ತು ಸಮಸ್ತರ ವತಿಯಿಂದ ಹಮ್ಮಿಕೊಂಡ ಕೋಟ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮೇಳದ ಗ್ರಾಮದ ಸೇವೆಯಾಟದಲ್ಲಿ ಕೋಟ ಸುರೇಶ್ ಬಂಗೇರರಿಗೆ ಯಕ್ಷಕಲಾವಿದ ಕೋಟ ವೈಕುಂಠ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಒರ್ವ ಕಲಾವಿದ ರಂಗಸ್ಥಳದಲ್ಲಿ ಹೇಗೆ ಪಳಗಬೇಕು ಎಂಬುವುದನ್ನು ಕೋಟ ವೈಕುಂಠರು ಆ ಕಾಲಘಟ್ಟದಲ್ಲಿ ತೊರಿಸಿಕೊಟ್ಟಿದ್ದಾರೆ,ಯಕ್ಷಗಾನ ಮೇಳವನ್ನು ಮುನ್ನುಡೆಸುವುದರೊಂದಿಗೆ ತನ್ನ ವೇಷ ನಿರ್ವಹಿಸುವ ಅವರ ಪರಿ ಪದಗಳಲ್ಲಿ ವರ್ಣಿಸಲು ಸಾಲದು ಅದೇ ರೀತಿ ತನ್ನ ಸಂಪ್ರದಾಯ ಬದ್ಧ ಯಕ್ಷಕಲೆಯ ಮೂಲಕ ಸುರೇಶ್ ಬಂಗೇರರು ಯಕ್ಷಕಲಾ ಕ್ಷೇತ್ರಕ್ಕೆ ಧಾರೆ ಎರೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ್ ಬಂಗೇರರಿಗೆ ಕೋಟ ವೈಕುಂಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೋಟತಟ್ಟು ಗ್ರಾಮದ ಹಿರಿಯರಾದ ಒಳಮಾಡು ಸೋಮ ಮರಕಾಲ, ಯಕ್ಷ ಸಂಘಟಕರಾದ ರಾಜು ಮರಕಾಲ, ರಂಜೀತ್ ಕುಮಾರ್, ರತ್ನಾಕರ ಬಾರಿಕೆರೆ, ಅನಂತ ಮರಕಾಲ, ಕೋಟ ಅಮೃತೇಶ್ವರೀ ದೇವಸ್ಥಾನದ ಟ್ರಸ್ಟಿಗಳಾದ ಎಂ.ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.










