ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕರಿಗಾಗಿ ಭಾಷಾ ಕೌಶಲ್ಯದ ಅಭಿವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರವು ಅನುಭವಿ ಶಿಕ್ಷಣ ತಜ್ಞೆ ಹಾಗೂ ಯೋಗ ಥೆರಪಿಸ್ಟ್ ಆಗಿರುವ ಜಯಶ್ರೀ ಮೃತ್ಯುಜಯ ಹಾಗೂ ಇನ್ನೋರ್ವ ಶಿಕ್ಷಣ ತಜ್ಞೆ ಅನುಪಮಾ ಆಲದಕಟ್ಟಿ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಾಗಾರದ ಮುಖ್ಯ ಉದ್ದೇಶವು ಶಿಕ್ಷಕರಲ್ಲಿ ಸಮರ್ಥ ಸಂವಹನ ಕೌಶಲ್ಯವನ್ನು ಬೆಳೆಸುವುದರೊಂದಿಗೆ ಒತ್ತಡ ರಹಿತ ದಿನಚರಿಯನ್ನು ಅನುಸರಿಸುತ್ತಾ, ಉತ್ತಮ ಶಿಕ್ಷಕರಾಗಿ ಹೊಮ್ಮಲು ಸಹಕರಿಸುವುದಾಗಿತ್ತು. ಪ್ರಸ್ತುತ ಶೈಕ್ಷಣಿಕ ವಾತಾವರಣದಲ್ಲಿ ಆಂಗ್ಲ ಭಾಷೆಯ ಪ್ರಾಮುಖ್ಯತೆ ಹಾಗೂ ಶಿಕ್ಷಕರ ಪಾತ್ರ ಎಷ್ಟು ಮಹತ್ವಪೂರ್ಣ ಎಂಬುದನ್ನು ಮನದಟ್ಟಾಗುವಂತೆ ಇಲ್ಲಿ ವಿವರಿಸಲಾಯಿತು.
ಜಯಶ್ರೀ ಮೃತ್ಯುಜಯ ಅವರು ವ್ಯಕ್ತಿತ್ವ ವಿಕಸನ ಹಾಗೂ ಸಮರ್ಥ ಸಂವಹನ ಕೌಶಲ್ಯದ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಿದರು. ಚಟುವಟಿಕೆ ಆಧಾರಿತ ವಿಧಾನಗಳ ಮೂಲಕ ಈ ಕೌಶಲ್ಯದ ಸದ್ಬಳಕೆ ಮಾಡುವ ಬಗ್ಗೆ ಸ್ಪಷ್ಟತೆ ನೀಡಲಾಯಿತು. ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡರು.
ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ಸುಜಾತಾ ಸದಾರಾಮ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಾಗಾರದ ಶೈಲಿಯನ್ನು ಶ್ಲಾಘಿಸಿದರು. ಇದರೊಂದಿಗೆ ಹಲವು ಶಿಕ್ಷಕರು ಕಾರ್ಯಾಗಾರದ ಕುರಿತಾಗಿ ತಮ್ಮ ಅನುಭವವನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಹಾಗೂ ಶಾಲಾ ಆಡಳಿತಾಧಿಕಾರಿಯವರಾದ ವೀಣಾರಶ್ಮಿ ಎಂ. ಇವರ ಮಾರ್ಗದರ್ಶನದೊಂದಿಗೆ ಕಾರ್ಯಾಗಾರವು ಸಂಪನ್ನಗೊಂಡಿತು.
















