ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯುಗಾದಿ ಉತ್ಸವವನ್ನು ಕೇಂದ್ರಿಕರಿಸಿಕೊಂಡು ಯಕ್ಷಕಲಾರಾಧನೆ ಅರ್ಥಪೂರ್ಣ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಅವರು ಬುಧವಾರ ಕಾರ್ಕಡ ಭೂಮಿಕ ಸಮೀಪ ಸೌರಮಾನ ಯುಗಾದಿ ಯಕ್ಷಗಾನ ಶೀರ್ಷಿಕೆಯಡಿ ಕೋಟ ಸಾಲಿಗ್ರಾಮ ಹದಿನಾಲ್ಕು ಗ್ರಾಮಗಳ ಯಕ್ಷಗಾನ ಕಲಾಭಿಮಾನಿಗಳ ನೇತೃತ್ವದಲ್ಲಿ ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ, ಪೆರ್ಡೂರು ಇವರಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಕಲಾರಾಧಕರನ್ನು ಅಭಿನಂದಿಸಿ ಮಾತನಾಡಿದರು.

ಯುಗಾದಿ ಎನ್ನುವುದು ಹೊಸ ಮನ್ವಂತರದ ಜತೆ ಹಳೆಯ ಚಿಂತನೆಗಳನ್ನು ನೆನಪಿಸುತ್ತಾ ಸಾಂಸ್ಕೃತಿಕ ಸಾಮಾಜಿಕ ಪುರಾತನ ಹಿನ್ನಲ್ಲೆಯನ್ನು ಈ ಸಮಾಜಕ್ಕೆಧಾರೆ ಎರೆಯುವ ಕಾರ್ಯ ಆಗಬೇಕಿದೆ,ಇಂದಿನ ಯುವ ಜನಾಂಗಕ್ಕೆ ಶಿಕ್ಷಣವೊಂದೆ ಶಿಕ್ಷೆಯಾಗದೆ ಸಂಸ್ಕಾರಭರಿತ ನಾಳಿನ ಸುಂದರ ಪ್ರಜೆಯಾಗಿ ರೂಪಿಸಲು ಕರೆ ನೀಡಿದರಲ್ಲದೆ ನಮ್ಮ ಕಲಾರಾಧನೆ,ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಅದನ್ನು ಉಳಿಸಿ ಬೆಳೆಸುವ ಕಾರ್ಯ ಆಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಯಕ್ಷಾಭಿಮಾನಿಗಳಾದ ರಾಘವೇಂದ್ರ ಮಧ್ಯಸ್ಥ ಪಾರಂಪಳ್ಳಿ, ಆನಂದ್ ಆಚಾರ್, ಎಚ್. ನಾಗರಾಜ್ ಹಂದೆ, ಗಣೇಶ್ ಕಿಣಿ, ಶ್ರೀಕಾಂತ್ ಐತಾಳ್, ರಮೇಶ್ ಭಂಡಾರಿ, ಸಿ.ಸೂರ್ಯನಾರಾಣ ಮಯ್ಯ, ಕೆ. ನಾಗರಾಜ ಸೋಮಯಾಜಿ ಮತ್ತಿತರರು ಅಭಿನಂದಿಸಲಾಯಿತು.
ವಿಶೇಷವಾಗಿ ಇತ್ತೀಚಿಗೆ ಸಾಲಿಗ್ರಾಮ ದೇಗುಲದ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶಾಲಿಗಳಾದ ಇಂದ್ರಪ್ರಸ್ಥ ಪ್ರಕಾಶ್ ಮಯ್ಯ ಹರ್ತಟ್ಟು ದಂಪತಿ, ಕೆ. ತಾರಾನಾಥ ಹೊಳ್ಳ ದಂಪತಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ಅಭಿನಂದನಾ ನುಡಿಗಳನ್ನಾಡಿದರು.
ಕಾರ್ಯಕ್ರಮವನ್ನು ಮಾಧುರಿ ಶ್ರೀರಾಮ್ ನಿರೂಪಿಸಿದರು. ಯಕ್ಷಾರಾಧಕ ಎಚ್ ಜನಾರ್ದನ ಹಂದೆ ವಂದಿಸಿದರು. ನಂತರ ಚಂದ್ರಹಾಸ ಚರಿತ್ರೆ ರತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು. ಗೆಳೆಯರ ಬಳಗ ಕಾರ್ಕಡ,ಕರ್ನಾಟಕ ಯಕ್ಷಧಾಮ ಮಂಗಳೂರು ಸಹಕಾರ ನೀಡಿತು.
















