ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರಮ ಸಂಸ್ಕೃತಿಯ ಪ್ರತೀಕವಾದ ಪ್ರಾಚ್ಯ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳ ಅರಿವು ಮಹತ್ವವಾದದ್ದು. ಅವುಗಳ ಬಳಕೆಯ ಹಿಂದಿನ ವೈಜ್ಞಾನಿಕ ಕಾರಣಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಉದಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರರಾದ ಪ್ರಶಾಂತ್ ಪಾದೆ ಹೇಳಿದರು.
ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಗುರುವಾರ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಆಯೋಜಿಸಿದ ಪ್ರಾಚ್ಯ ವಸ್ತುಗಳ ಪ್ರದರ್ಶನದಲ್ಲಿ ತೀರ್ಪುಗಾರರಾಗಿ ಹಾಗೂ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇನ್ನೋರ್ವ ಮುಖ್ಯ ಅತಿಥಿ ಕುಂದಾಪುರ ಡಾಟ್ ಕಾಮ್‌ನ ಸಂಪಾದಕ ಸುನಿಲ್ ಹೆಚ್. ಜಿ. ಮಾತನಾಡಿ, ಪ್ರತಿ ಪ್ರಾಚ್ಯ ವಸ್ತುಗಳ ಹಿಂದೆ ಬೆವರಿನ ಮೂಲದ, ಶ್ರಮ ಸಂಸ್ಕೃತಿಯ ಕಥೆ ಇದೆ. ದೀರ್ಘಕಾಲ ಬಾಳಿಕೆ ಬರುವ ಮತ್ತು ಮರುಬಳಕೆಯ ವಸ್ತುಗಳನ್ನು ಹಿರಿಯರು ಯಥೇಚ್ಛವಾಗಿ ಬಳಸುತ್ತಿದ್ದರು. ಇದು ಅವರ ಪರಿಸರ ಕಾಳಜಿಯನ್ನು ಧ್ವನಿಸುತ್ತದೆ. ಇಂದು ಮರುಬಳಕೆಯಾಗದ ಪ್ಲಾಸ್ಟಿಕ್ ನಂತಹ ವಸ್ತುಗಳಿಂದ ಪ್ರಕೃತಿ ನಾಶವಾಗುತ್ತಿದೆ. ಈ ಕುರಿತು ವಿದ್ಯಾರ್ಥಿಗಳು ಚಿಂತಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಉಪ- ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ ಹಾಗೂ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಮನೀಶಾ ಪ್ರಾರ್ಥಿಸಿ, ಆಕಾಶ್ ಬಿ. ಶೆಟ್ಟಿ, ಕಾವ್ಯ ಅತಿಥಿಗಳನ್ನು ಪರಿಚಯಿಸಿ, ಆದೇಶ್ ಗಾಣಿಗ ಸ್ವಾಗತಿಸಿ, ನಿರೀಕ್ಷಾ ನಿರೂಪಿಸಿ, ರಚನಾ ವಂದಿಸಿದರು.
















