ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪಂಚಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಪ್ರಸ್ತುತ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆಯೂ ಆಗಲಿದ್ದು ಅಧಿಕಾರಿಗಳು ಯಾವುದೇ ಫಲಾನುಭವಿ ತಪ್ಪಿ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕು೦ದಾಪುರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಹೇಳಿದರು.
ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಚ್ಚು ಅನುಭವ ಇರುವ ಸಿಬ್ಬಂದಿಗಳನ್ನು ಈ ಪರಿಷ್ಕರಣೆ ಕಾರ್ಯದಲ್ಲಿ ನಿಯೋಜನೆ ಮಾಡುವ ಮೂಲಕ ಯಾರಿಗೂ ಸಮಸ್ಯೆಯಾಗದಂತೆ ಪರಿಷ್ಕರಣೆ ಪ್ರಕ್ರಿಯೆ ನಡೆಯಬೇಕು ಎಂದರು.
ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ನಡೆಯುತ್ತಿದ್ದು, ಈ ಯೋಜನೆಯಡಿ ಒಟ್ಟು 73868 ನೊಂದಣಿಯಾಗಿದ್ದು, 48322 ಪೂರ್ಣ ಪರಿಷ್ಕರಣೆಯಾಗಿದ್ದು, 25546 ಅರ್ಜಿಗಳು ಬಾಕಿ ಇದೆ. ಬಾಕಿ ಇರುವ ಅರ್ಜಿಗಳ ಪೈಕಿ ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಇರುವ ಸಾಧ್ಯತೆಗಳಿರುತ್ತದೆ ಅಲ್ಲದೆ ಮೊಬೈಲ್ ಇಲ್ಲದಿರುವವರು ಇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲರೂ ಸೇರಿಕೊಂಡು ಅಂತಹ ಫಲಾನುಭವಿಗಳಿಗೆ ಪರಿಷ್ಕರಣೆ ಮಾಡಲು ಸಹಕಾರ ಮಾಡಬೇಕು. ಮುಂದಿನ ದಿನಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆ ಕೂಡ ನಡೆಯಲಿದೆ ಎ೦ದರು.
ಕುಂದಾಪುರ ತಾಲೂಕಿಗೆ ಜೂನ್ ತಿ೦ಗಳಿನಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ ರೂ.4.86,22,000, ಗೃಹಜ್ಯೋತಿ ಯೋಜನೆಯಲ್ಲಿ ರೂ. 4.38,46,208 ಅನ್ನಭಾಗ್ಯ ಯೋಜನೆಯಲ್ಲಿ ರೂ.2.66,08,700, ಯುವನಿಧಿ ಯೋಜನೆಯಲ್ಲಿ ರೂ.5.07,000, ಶಕ್ತಿ ಯೋಜನೆಯಲ್ಲಿ ರೂ.3.16,45,161, ಬಿಡುಗಡೆಯಾಗಿದೆ. ಇಲ್ಲಿನ ತನಕ ಒಟ್ಟು 597,62,71,084 ಕುಂದಾಪುರ ತಾಲೂಕಿಗೆ ಬಿಡುಗಡೆಯಾಗಿದೆ ಎಂದರು.
ಹಕ್ಲಾಡಿ ಮತ್ತು ಆಲೂರು ಮಾರ್ಗಕ್ಕೆ ಇನ್ನೂ ಸರಕಾರಿ ಬಸ್ ಸೌಲಭ್ಯ ಕಲ್ಪಿಸಲಾಗಿಲ್ಲ. ಶಾಲಾ ಕಾಲೇಜು ಸಮಯಕ್ಕಾದರೂ ಬಸ್ ಓಡಿಸಿ ಎಂದು ಸದಸ್ಯ ಅರುಣ ಮನವಿ ಮಾಡಿದರು.
ಹೇರಿಕುದ್ರು ಬಸ್ ತಂಗುದಾಣದಲ್ಲಿ ಕೆಎಸ್.ಆರ್.ಟಿಸಿ ಲೋಕಲ್ ಬಸ್ ನಿಲ್ಲಿಸುತ್ತಿಲ್ಲ. ಸಾಕಷ್ಟು ಬಾರಿ ಈ ಬಗ್ಗೆ ಇದೇ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸದಸ್ಯ ಅಭಿಜಿತ್ ಪೂಜಾರಿ ಹೇಳಿದರು.
ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಮಾತನಾಡಿ, ಕೆಎಸ್.ಆರ್.ಟಿಸಿ ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮವಹಿಸಬೇಕು. ಬಸ್ ನಿಲ್ಲಿಸಲು ಸಾಧ್ಯವೋ ಇಲ್ಲವೋ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಲ್ಲಿ ಫೆಬ್ರವರಿ ತಿಂಗಳ ತನಕ ಹಣ ಪಾವತಿಯಾಗಿದೆ. ಕುಂದಾಪುರ ತಾಲೂಕಿನಲ್ಲಿ ಸುಮಾರು 1705 ಮರಣ ಹೊಂದಿದವರ ಖಾತೆಗೆ ಸುಮಾರು 50 ಲಕ್ಷ ರೂ. ಜಮೆ ಆಗಿದ್ದು, ಈ ಪೈಕಿ 16 ಲಕ್ಷ ರೂ.ಗಳನ್ನು ಬ್ಯಾಂಕ್ ಖಾತೆಯಿಂದ ಡ್ರಾ ಮಾಡಿಕೊಂಡಿದ್ದಾರೆ. 13 ಲಕ್ಷ ರೂ.ಗಳನ್ನು ಫ್ರೀಜ್ ಮಾಡಲಾಗಿದ್ದು, 19 ಲಕ್ಷ ರೂ. ವಾಪಾಸ್ ಕಟ್ಟಿದ್ದಾರೆ ಎಂದರು.
ಮಳೆಗಾಲದಲ್ಲಿ ಲೈನ್‌ಮ್ಯಾನ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವು ಮಾಡುವ ಕಾರ್ಯವಾಗದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಮಳೆಗಾಲದಲ್ಲಿ ಈ ಮರಗಳು ಬಿದ್ದರೆ ಕಂಬಗಳು ಮುರಿದು ಹೋಗುತ್ತವೆ. ಕೂಡಲೇ ತೆರವು ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಮೆಸ್ಕಾಂ ಅಧಿಕಾರಿಗಳು ಮಾತನಾಡಿ ಈಗಾಗಲೇ ಕೆಲವು ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವು ಮಾಡಲಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತ೦ದಿದ್ದೇವೆ ಎಂದರು.
ಗಂಗೊಳ್ಳಿಯಲ್ಲಿ ಪಡಿತರ ಅಂಗಡಿ ಸಮೀಪ ಪಡಿತರ ಪಡೆಯುವ ವೇಳೆ ಗಲಾಟೆ ನಡೆದಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸದಸ್ಯ ಜಹೀರ್ ಅಹಮ್ಮದ್ ಆಗ್ರಹಿಸಿದರು. ಫಲಾನುಭವಿಗಳು ಪಡಿತರ ಪಡೆಯುವ ಸ೦ದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಡಿತರ ಅಂಗಡಿ ಸಮೀಪ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ ಜಿ ಸ್ವಾಗತಿಸಿ, ವಂದಿಸಿದರು.
















