ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪದವಿ ಶಿಕ್ಷಣದ ಜೊತೆಗೆ ನಾಯಕತ್ವ, ಸಹಾಯ, ಸಹಕಾರ ಮನೋಭಾವದೊಂದಿಗೆ ದೇಶಪ್ರೇಮವನ್ನು ಬೆಳೆಸಿಕೊಳ್ಳಿ. ಆ ಮೂಲಕ ಮುಂದೆ ದೇಶದ ಒಳ್ಳೆಯ ಪ್ರಜೆಗಳಾಗುವುದರೊಂದಿಗೆ ಭವಿಷ್ಯದ ನಾಯಕರಾಗಿ ಎಂದು ಉಡುಪಿ ಜಿಲ್ಲೆಯ ಅಥ್ಲೇಟಿಕ್ ಅಸೋಸಿಯೇಶನ್ಸ್ ಅಧ್ಯಕ್ಷರಾದ ಲಯನ್ ಹರಿಪ್ರಸಾದ್ ರೈ ಹೇಳಿದರು.
ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭ ಅವರು ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ಕ್ಷಮತೆಯನ್ನು ಮೈಗೂಡಿಸಿಕೊಳ್ಳಿ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಹೆಚ್ಚು ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಆ ಮೂಲಕ ನಾಯಕತ್ವದೊಂದಿಗೆ ಸಮಾಜಮುಖಿಯಾಗಿ ಚಿಂತಿಸುವಂತಾಗಬೇಕು ಎಂದರು.
ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ, ರೇಷ್ಮಾ ಶೆಟ್ಟಿ, ಕ್ರೀಡಾ ಪ್ರತಿನಿಧಿ ನಿಶಾಂತ ಡಿಸೋಜ, ಸಾಂಸ್ಕೃತಿಕ ಪ್ರತಿನಿಧಿ ಅಭಿಷೇಕ್ ಪ್ರತಿ ತರಗತಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಕಾರ್ಯದರ್ಶಿ ವಿಕಾಸ್ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್ಕ್ಯೂಎಸಿ ಪ್ರತಿನಿಧಿ ಖುಷಿ ಶೆಟ್ಟಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಕಾರ್ಯಕ್ರಮಗಳನ್ನು ವಿವರಿಸಿದರು. ವಿದ್ಯಾರ್ಥಿಗಳಾದ ಮನೀಷಾ ಪ್ರಾರ್ಥಿಸಿ, ಪ್ರಥಾ ಆರ್. ಶೆಟ್ಟಿ ಸ್ವಾಗತಿಸಿ, ರಾಕೇಶ್ ವಂದಿಸಿ, ರಶ್ಮಿತಾ ನಿರೂಪಿಸಿದರು.
















