ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರ್ಕಳದ ಕ್ರಿಯೆಟಿವ್ ಗ್ಲೋಬಲ್ ಸ್ಕೂಲ್ ನ 2026-27ನೇ ಸಾಲಿನ ನೂತನ ವಿದ್ಯಾರ್ಥಿ ಪರಿಷತ್ತು ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಪ್ತಸ್ವರ ಶುಕ್ರವಾರ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಸ್ಥೆಯ ಸಂಸ್ಥಾಪಕರುಗಳಾದ ಅಶ್ವಥ್ ಎಸ್ ಎಲ್, ಆದರ್ಶ ಎಂ.ಕೆ, ಡಾ. ಗಣನಾಥ್ ಶೆಟ್ಟಿ, ಗಣಪತಿ ಭಟ್ ಕೆ.ಎಸ್, ವಿಮಲ್ ರಾಜ್ ಹಾಗೂ ಅಮೃತ ರೈ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಗೌರವದ ಬ್ಯಾಡ್ಜ್ ಗಳನ್ನು ತೊಡಿಸಿದರು.
ಸಂಸ್ಥಾಪಕರಾದ ವಿಮಲ್ ರಾಜ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಥನಾಡಿ, ಶಿಕ್ಷಣದ ಜೊತೆಗೆ ನಾಯಕತ್ವ, ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು.ನಾಯಕತ್ವ ಕೇವಲ ಅಧಿಕಾರವಲ್ಲ. ಅದು ಜವಾಬ್ದಾರಿ ಶಿಸ್ತು,. ಶಾಲೆಯ ಗೌರವವನ್ನು ಹೆಚ್ಚಿಸುವಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು ಹಾಗೂ ಸಂಸ್ಥಾಪಕರಾದ ಅಶ್ವತ್ ಎಸ್ ಎಲ್ ಇವರು ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿಯೇ ದೊಡ್ಡ ಕನಸುಗಳನ್ನು ಕಾಣುವುದು, ಸಮಾಜದ ಒಳಿತಿಗಾಗಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದರು.
ನಂತರ ಶಾಲಾ ಪ್ರಾಂಶುಪಾಲರಾದ ಅಕ್ಷತಾ ಶೆಣೈ ಇವರು ನೂತನವಾಗಿ ಆಯ್ಕೆಯಾದ ಶಾಲಾ ನಾಯಕ ಪ್ರತ್ಯಕ್ಷ ನಾಯಕ್ ಹಾಗೂ ನಾಯಕಿ ಪ್ರಾಪ್ತಿ ನೆಲ್ಲಿ, ವಿವಿಧ ಸದನಗಳ ನಾಯಕರು ಮತ್ತು ಕ್ರೀಡೆ, ಶಿಸ್ತು ಮತ್ತು ಸಾಂಸ್ಕೃತಿಕ ವಿಭಾಗಗಳ ಪ್ರತಿನಿಧಿಗಳಿಗೆ ಅಧಿಕಾರದ ಪ್ರತಿಜ್ಞಾವಿಧಿ ಬೋಧಿಸಿದರು.
ಸಮಾರಂಭದಲ್ಲಿ ಶಾಲೆಯ ಶಿಕ್ಷಕರವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.
















