ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಇಡೀ ದಿನಸಿ ಅಂಗಡಿ ಬೆಂಕಿಗಾಹುತಿಯಾದ ಘಟನೆ ತೆಕ್ಕೆಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಶ್ರೀ ಬ್ರಹ್ಮಸ್ಥಾನ ಸಮೀಪದ ‘ಗುರು ಬ್ರಹ್ಮ ಜನರಲ್ ಸ್ಟೋರ್’ನಲ್ಲಿ ಸೋಮವಾರ ತಡರಾತ್ರಿ ಸುಮಾರು 1.30ಕ್ಕೆ ಸಂಭವಿಸಿದೆ.
ಅಂಗಡಿ ಮಾಲೀಕರಾದ ಸಂತೋಷ್ ಅವರು ಎಂದಿನಂತೆ ವ್ಯಾಪಾರ ಮುಗಿಸಿ ಮನೆಗೆ ತೆರಳಿದ ಬಳಿಕ, ತಡರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಇಡೀ ಅಂಗಡಿಗೆ ಹರಡಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ದಿನಸಿ ಸಾಮಗ್ರಿಗಳು, ಫ್ರಿಡ್ಜ್ ಹಾಗೂ ಪೀಠೋಪಕರಣಗಳು ಬೆಂಕಿಗೆ ಭಸ್ಮವಾಗಿವೆ.
ಫ್ರಿಡ್ಜ್ ಶಾರ್ಟ್ ಸರ್ಕ್ಯೂಟ್ ಶಂಕೆ:
ಅಂಗಡಿಯಲ್ಲಿದ್ದ ಮೂರಕ್ಕೂ ಹೆಚ್ಚು ಫ್ರಿಡ್ಜ್ ಗಳ ಪೈಕಿ ಒಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಈ ಅಗ್ನಿ ಅವಘಡದಿಂದ ಸುಮಾರು 40 ಲಕ್ಷಕ್ಕೂ ಅಧಿಕ ರೂಪಾಯಿ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.











