ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರೊಂದು ಸ್ಕೂಟರ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕುಂಭಾಶಿ ಆನೆಗುಡ್ಡೆ ಸ್ವಾಗತ ಗೋಪುರದ ಬಳಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮದ ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ.
ಆಗಸ್ಟ್ 3ರಂದು ರಾತ್ರಿ ಸುಮಾರು 10:15 ಗಂಟೆಯ ವೇಳೆಗೆ ಗಣೇಶ್ ಅವರು ತಮ್ಮ ಸ್ಕೂಟರ್ ನಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಚಲಿಸುತ್ತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಬಂದ ಅರವಿಂದ್ ಎಂಬಾತ ಚಾಲನೆ ಮಾಡುತ್ತಿದ್ದ ಕಾರು ಅತಿವೇಗ ಹಾಗೂ ಜಾಗರೂಕತೆ ಇಲ್ಲದೆ ಬಂದು ಗಣೇಶ್ ಅವರ ಸ್ಕೂಟರ್‌ಗೆ ಹಿಂಬದಿಯಿಂದ ಬಲವಾಗಿ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಗಣೇಶ್ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ತಲೆ, ಮುಖ, ಹೊಟ್ಟೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ತೀವ್ರ ಸ್ವರೂಪದ ರಕ್ತಗಾಯ ಹಾಗೂ ಒಳಪೆಟ್ಟುಗಳಾಗಿ ಪ್ರಜ್ಞೆ ಕಳೆದುಕೊಂಡಿದ್ದರು. ಕೂಡಲೇ ಗಾಯಾಳುವನ್ನು ಕೋಟೇಶ್ವರದ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಯಿತು ಆದರೂ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮುಂಜಾನೆ ಸುಮಾರು 2 ಗಂಟೆಗೆ ಗಣೇಶ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















