ಕುಂದಾಪುರ: ರಾಜ್ಯ ಸರಕಾರವು ಭಾಗ್ಯಗಳ ನಡುವೆ ರಾಜ್ಯದ ಅಭಿವೃದ್ಧಿಯನ್ನೇ ಮರೆತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಜನರಿಗೆ ಅವಶ್ಯವಿರುವುದನ್ನು ಮಾಡುವುದನ್ನು ಬಿಟ್ಟು ತಾವು ಅಂದುಕೊಂಡಿದ್ದನ್ನೇ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಒಂದು ಬಜೆಟ್ ಮಂಡಿಸಿ ಮತ್ತೊಂದು ಬಜೆಟ್ ಮಂಡನೆಗೆ ಕಾಲ ಸನ್ನಿತವಾಗುತ್ತಿದ್ದರು ಬಜೆಟ್‌ನಲ್ಲಿ ಮೀಸಲಿಟ್ಟ ಹಣದಲ್ಲೇ ಶೇ.25 ರಷ್ಟು ಅನುದಾನ ಬಳಕೆಯಾಗಿಲ್ಲ. ಬಜೆಟ್‌ನಲ್ಲಿ ಸಂಗ್ರಹವಾದ ಹಣ, ಖರ್ಚು, ಹಾಗೂ ಕೊರೆತೆ ಬಗ್ಗೆ ಮಾಹಿತಿಯೂ ಸಿಗುತ್ತಿಲ್ಲ ಎಂದು ಉಡುಪಿ-ಚಿಕ್ಕಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಆರೋಪಿಸಿದರು
ಕೋಟೇಶ್ವರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೇಂದ್ರ ಸರಕಾರ ಗ್ರಾಮೀಣ ಅಭಿವೃದ್ಧಿ ದೃಷ್ಟಿಯಲ್ಲಿ ಗ್ರಾಮ ಪಂಚಾಯತಿಗಳಿಗೆ ನೇರ ಅನುದಾನ ಬಿಡುಗಡೆ ಮಾಡಿದರೆ, ರಾಜ್ಯ ಸರಕಾರಕ್ಕೆ ಕೇಂದ್ರ ಬಿಡುಗಡೆ ಮಾಡಿದ ಅನುದಾನದಲ್ಲಿ ಗ್ರಾಪಂ ಬಾಕಿ ವಿದ್ಯುತ್ ಬಿಲ್ಲಿಗೆ ಬಳಸಿಕೊಳ್ಳುವಷ್ಟು ದಾರಿದ್ರ್ಯ ಬಂದೊದಗಿದೆ. ಗ್ರಾಮೀಣ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಅನುದಾನವನ್ನು ಇಲಾಖೆ ಅಧಿಕಾರಿಗಳು ಬ್ಯಾಂಕಿನಲ್ಲಿಟ್ಟು ಬಡ್ಡಿ ಪಡೆಯುತ್ತಿದ್ದ ಬಗ್ಗೆ ಸಚಿವ ಎಚ್.ಕೆ.ಪಾಟೀಲ್ ಅವರರೇ ಪ್ರಸ್ತಾಪಿಸಿದ್ದರು. ರಾಜ್ಯದಲ್ಲಿ ಕೆಲಸ ಮಾಡದಿದ್ದರು, ಸರ್ಟಿಫಿಕೇಟ್ ನೀಡಿ, ಅನುದಾನದ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದ ರಸ್ತೆ, ಕುಡಿಯುವ ನೀರು ಯೋಜನೆಗೆ ಕೇಂದ್ರ ಸರಕಾರ ನೀಡಿದ ಅನುದಾನದಕ್ಕೆ ಈವರಗೆ ರಾಜ್ಯದಲ್ಲಿ ಕ್ರಿಯಾ ಯೋಜನೆ ಸಿದ್ದಗೊಂಡಿಲ್ಲ ಎಂಬುದು ರಾಜ್ಯ ಸರಕಾರದ ಆಮೆ ನಡಿಗೆಯನ್ನು ಸಾಕ್ಷೀಕರಿಸುತ್ತದೆ ಎಂದರು.
ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತ ಮತ್ತು ಇಂದಿನ ಸಿದ್ದರಾಮಯ್ಯ ಸರಕಾರದ ಕೆಲಸವನ್ನು ಜನ ಸಾಮಾನ್ಯರು ತುಲನೆ ಮಾಡಿ ನೋಡಿದ ಜನರಲ್ಲಿ ರಾಜ್ಯ ಸರಕಾರದ ಕೆಲಸದ ಬಗ್ಗೆ ಆಕ್ರೋಶ ಮೂಡಿದ್ದು, ಎಲ್ಲಾ ವಿಭಾಗದಲ್ಲೂ ರಾಜ್ಯ ಸರಕಾರ ಅಭಿವೃದ್ಧಿ ಕಡೆಗಣಿಸಿದೆ ಎಂದು ಆರೋಪಿಸಿದರು.
ತಾಪಂ ಜಿಪಂ ಚುನಾವಣೆಯಲ್ಲಿ ಒಮ್ಮತ ಅಭ್ಯರ್ಥಿ ಆಯ್ಕೆಗೆ ಒತ್ತು ನೀಡಲಾಗುತ್ತದೆ. ಅಭರ್ಥಿ ಆಯ್ಕೆ ಹಿನ್ನೆಲೆಯಲ್ಲಿ ಕಾರ‍್ಯಕರ್ತರ ಶಕ್ತಿ ಕೇಂದ್ರಕ್ಕೆ ಭೇಟಿ ನೀಡಿ ಅಭ್ಯರ್ಥಿ ಹೆಸರು ಸೂಚಿಸುತ್ತಾರೆ ಎಲ್ಲರಿಗೂ ಒಪ್ಪಿಗೆಯಾದ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತಿದ್ದು, ಈ ಪ್ರಕ್ರಿಯೆ ಬೈಂದೂರಿನಲ್ಲಿ ಸಂಪೂರ್ಣಗೊಂಡಿದ್ದು, ಉಡುಪಿ, ಕಾಪು, ಕಾರ್ಕಳದಲ್ಲೂ ಇದೇ ರೀತಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ರಾಜ್ಯ ಬಿಜೆಪಿ ಮೀನುಗಾರ ಪ್ರಕೋಷ್ಠ ಅಧ್ಯಕ್ಷ ಕಿಶೋರ್ ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಕುಂದಾಪುರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ, ಬಿಜೆಪಿ ಪದಾಧಿಕಾರಿಗಳಾದ ರವೀಂದ್ರ ದೊಡ್ಮನೆ, ರಾಜೀವ ಶೆಟ್ಟಿ ಇದ್ದರು.