ಕುಂದಾಪುರ: ನಾಡ-ಸೇನಾಪುರ ರಸ್ತೆ ಮರುಡಾಂಬರೀಕರಣ ಕಾಮಗಾರಿಯು ಕಳಪೆಯಾಗಿದ್ದು, ಶಾಸಕರ ನಿಧಿ ಹಣ ದುರುಪಯೋಗಪಡಿಸಲಾಗಿದೆ ಎಂದು ಸಿಪಿಎಂ ಬೈಂದೂರು ವಲಯ ಸಮಿತಿ ಆರೋಪಿಸಿದೆ.
ಕಳೆದ ಹಲವಾರು ಸಮಯದಿಂದ ನಾಡ-ಸೇನಾಪುರ ರಸ್ತೆ ದುರಸ್ತಿಯಲ್ಲಿದ್ದು ಗ್ರಾಮದ ಜನರು ಪ್ರಯಾಣ ಮಾಡಲು ಚಿತ್ರಹಿಂಸೆ ಅನುಭವಿಸುತ್ತಿದ್ದರು. ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದ ಸಿಪಿಎಂ ಹೋರಾಟ ನಡೆಸಿ ಮನವಿ ನೀಡಿದ ನಂತರ ಶಾಸಕರ ನಿಧಿಯಿಂದ ಮರುಡಾಂಬರೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿಗೆ 20 ಎಂಎಂ, 10 ಎಂಎಂ. ಹಾಗೂ 06 ಎಂಎಂ ಜೆಲ್ಲಿ ಮಿಶ್ರಣ ಮಾಡಿ ಮಾಡಬೇಕಾದ ರಸ್ತೆ ಕಾಮಗಾರಿಯನ್ನು ಕೇವಲ 10 ಎಂಎಂ ಮತ್ತು 06 ಎಂಎಂ ಮಾತ್ರ ಮಿಶ್ರಣ ಮಾಡಿ ಕಳಪೆ ಕಾಮಗಾರಿ ಮಾಡಿ ಜನರ ಹಣ ಲೂಟಿ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಇಲಾಖೆಯು ನಿಧಿ ದುರ್ಬಳಕೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಸಿಪಿಎಂ ಒತ್ತಾಯಿಸಿದೆ. ಇಲ್ಲವಾದಲ್ಲಿ ಸಿಪಿಎಂ ಪಕ್ಷ ಹೋರಾಟ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದೆ.