ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ರಾಜ್ಯದಲ್ಲಿ ಎನ್. ಡಿ. ಪಿ ಎಸ್ ಕಾಯ್ದೆ ರಡಿಯಲ್ಲಿ ಮತ್ತು ಗಾಂಜಾ ಸಹಿತ ಇನ್ನಿತರ ಮಾದಕ ದ್ರವ್ಯ ಗಳ ಸಾಗಾಟ ಮತ್ತು ಸೇವನೆ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ.
ಚುಕ್ಕೆ ರಹಿತ ಪ್ರಶ್ನೆ ಗೆ ರಾಜ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಯವರು ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಮಾದಕ ದ್ರವ್ಯ ಸೇವನೆ ಹಾಗೂ ಸಾಗಾಟಕ್ಕೆ ಸಂಬಂಧಿಸಿದಂತೆ 18,428 ಪ್ರಕರಣಗಳು ದಾಖಲಾಗಿದ್ದು 10,131 ಆರೋಪಿತರು ಸೇರಿರುತ್ತಾರೆ. ಇದರ ಪೈಕಿ 5249 ಜನರ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿದ್ದು 981 ಪ್ರಕರಣದ 2130 ಮಂದಿಯನ್ನು ದೋಷಿ ಎಂದು ಸಾಬೀತು ಪಡಿಸಲಾಗಿದೆ. ಅವರಿಂದ 2.69 ಕೋಟಿ ದಂಡ ಮೊತ್ತ ವಸೂಲಿ ಮಾಡಲಾಗಿದೆ ಹಾಗೂ ಮಾದಕ ದ್ರವ್ಯ ಸೇವನೆ ಹಾಗೂ ಸಾಗಾಟಕ್ಕೆ ಸಂಬಂಧಿಸಿದಂತೆ ಕಳೆದ 3 ವರ್ಷಗಳಲ್ಲಿ 25,011 ಆರೋಪಿತರನ್ನು ಗುರುತಿಸಲಾಗಿದ್ದು ಅದರ ಪೈಕಿ 1166 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಜಾಗೃತಿ ಕಾರ್ಯಕ್ರಮಗಳ ಹೊರತೂ ನಿಲ್ಲದ ಮಾದಕ ದೃವ್ಯ ಸೇವನೆ ಹಾಗೂ ಸಾಗಾಟ ಪ್ರಕರಣ ಗಳು:
ಶಾಲಾ ಕಾಲೇಜು ಆವರಣಗಳಲ್ಲಿ ನಿಷೇಧಿತ ಪದಾರ್ಥದ ಮಾರಾಟ ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ ವರ್ಷದಿಂದ ವರ್ಷಕ್ಕೆ ಮಾದಕ ವ್ಯಸನಿಗಳ ಸಂಖ್ಯೆ ಅದರಲ್ಲೂ ವಿದ್ಯಾರ್ಥಿಗಳ ಸಮೂಹ ಬಲಿಯಾಗುತ್ತಿರುವುದರಿಂದ ಈ ಬಗ್ಗೆ ಸರಕಾರ ಕೈಗೊಂಡ ಕ್ರಮಗಳ ಕುರಿತು ಕೇಳಿದ ಮರು ಪ್ರಶ್ನೆಗೆ ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಕಳೆದ 3 ವರ್ಷಗಳಲ್ಲಿ 66,656 ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದು, 58. 41 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಸಚಿವರು ಉತ್ತರಿಸಿದರು.
ಮಾದಕ ವಸ್ತು ನಿಗ್ರಹ ಕಾರ್ಯಪಡೆಗೆ ಶಕ್ತಿ ತುಂಬಲು ಆಗ್ರಹ:
ರಾಜ್ಯದಲ್ಲಿ ಡ್ರಗ್ಸ್ ಮಾಫಿಯ ನಿಗ್ರಹ ಮಾಡಲು ರಚನೆ ಗೊಂಡ ಮಾದಕ ವಸ್ತು ನಿಗ್ರಹ ಕಾರ್ಯಪಡೆ (ಎ.ಎನ್.ಟಿ.ಎಫ್ ) ಖಾಯಂ ಮುಖ್ಯಸ್ಥರ ನೇಮಕ ಹಾಗೂ ಮಾದಕ ವಸ್ತು ದಂಧೆ ಕೋರರ ವಿರುದ್ಧ ಎಫ್ಐ ಆರ್ ದಾಖಲಿಸಿ ತನಿಖೆ ನಡೆಸಲು ಪ್ರಸ್ತುತ ಎ.ಎನ್.ಟಿ.ಎಫ್ ಸಂಸ್ಥೆಗೆ ಅಧಿಕಾರ ಇಲ್ಲದೇ ಇರುವ ಬಗ್ಗೆ ಪ್ರಸ್ತಾಪಿಸಿ ಸದರಿ ಸಂಸ್ಥೆಗೆ ಖಾಯಂ ಮುಖ್ಯಸ್ಥರ ಜೊತೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಿ ಪ್ರಕರಣದ ತನಿಖೆ ನಡೆಸುವ ಅಧಿಕಾರ ನೀಡಲು ಕೇಳಿರುವ ಪೂರಕ ಪ್ರಶ್ನೆಗೆ ಅಪರ ಪೊಲೀಸ್ ಮಹಾ ನಿರ್ದೇಶಕರು ( ಕಾನೂನು ಮತ್ತು ಸುವ್ಯವಸ್ಥೆ) ಇವರನ್ನು ಎ.ಎನ್.ಟಿ.ಎಫ್ ಮುಖ್ಯಸ್ಥರ ರ ಹುದ್ದೆಗೆ ಪ್ರಸ್ತುತ ಹೆಚ್ಚುವರಿ ಪ್ರಭಾರದಲ್ಲಿ ಇರಿಸಲಾಗಿದ್ದು ಎ.ಎನ್.ಟಿ.ಎಫ್ ಘಟಕಕ್ಕೆ ಪೊಲೀಸ್ ಠಾಣೆ ಅಧಿಕಾರ ನೀಡುವ ಕುರಿತು ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ಶಾಸಕರ ಪೂರಕ ಪ್ರಶ್ನೆಗೆ ಸಚಿವರು ಇದೇ ಸಂದರ್ಭದಲ್ಲಿ ಉತ್ತರಿಸಿದ್ದಾರೆ.
















